ಕೋಝಿಕ್ಕೋಡ್: ಬಾಟಲಿಯ ಮುಚ್ಚಳ ಗಂಟಲಿನಲ್ಲಿ ಸಿಲುಕಿಕೊಂಡ ಪರಿಣಾಮ ಮೂರು ವರ್ಷದ ಮಗು ಮೃತಪಟ್ಟ ದಾರುಣ ಘಟನೆ ಕೇರಳದ ಕೋಝಿಕ್ಕೋಡ್’ನ ಮುಕ್ಕಮ್ ಎಂಬಲ್ಲಿ ನಡೆದಿದೆ.
ಬಿಜು ಮತ್ತು ಆರ್ಯ ದಂಪತಿಯ ಪುತ್ರಿ ವೇದಿಕಾ (3), ಭಾನುವಾರ ರಾತ್ರಿ ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಮುಚ್ಚಳವು ಗಂಟಲಿನಲ್ಲಿ ಸಿಲುಕಿಕೊಂಡಿತ್ತು. ಆದರೆ ಪೋಷಕರಿಗೆ ತಕ್ಷಣವೇ ಇದು ಅರಿವಿಗೆ ಬಂದಿಲ್ಲ. ಮಗು ಉಸಿರಾಟದ ತೊಂದರೆ ಅನುಭವಿಸುತ್ತಿರುವುದನ್ನು ಗಮನಿಸಿದ ಬಳಿಕ ಮುಕ್ಕಮ್ನಲ್ಲಿರುವ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ವೈದ್ಯರ ಬಳಿ ಪೋಷಕರು, ಮಗುವಿನ ಗಂಟಲಿನಲ್ಲಿ ಆಹಾರ ಸಿಲುಕಿರುವ ಸಂಶಯ ವ್ಯಕ್ತಪಡಿಸಿದ್ದರು.
ಸ್ಕ್ಯಾನಿಂಗ್ ನಡೆಸಿದ ವೈದ್ಯರಿಗೆ ಮಗುವಿನ ಗಂಟಲಿನಲ್ಲಿ ಬಾಟಲಿಯ ಮುಚ್ಚಳ ಸಿಲುಕಿಕೊಂಡಿರುವುದು ಕಂಡುಬಂದಿದೆ. ಮುಚ್ಚಳ ಗಂಟಲಿನಲ್ಲಿ ಬಿಗಿಯಾಗಿ ಸಿಕ್ಕಿಕೊಂಡಿದೆ ಎಂದು ಅರಿತ ವೈದ್ಯರು ಮಗುವನ್ನು ಕೂಡಲೇ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲು ಸೂಚನೆ ನೀಡಿದ್ದಾರೆ. ಆಮ್ಲಜನಕದ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದ ಕಾರಣ, ಪೋಷಕರು ಆಸ್ಪತ್ರೆ ತಲುಪುವಷ್ಟರಲ್ಲಿ ಮಧ್ಯರಾತ್ರಿಯ ವೇಳೆಗೆ ಮಗು ಮೃತಪಟ್ಟಿದೆ.
ಪುಟ್ಟ ಮಕ್ಕಳಿಗೆ ಆಟವಾಡಲು ಹೆಚ್ಚಾಗಿ ಚೀನಾದ ಆಟಿಕೆಗಳನ್ನು ನೀಡುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ ಈ ಪ್ಲಾಸ್ಟಿಕ್ ವಸ್ತುಗಳು ಸೇರಿದಂತೆ, ಮಕ್ಕಳ ಕೈಯ್ಯಲ್ಲಿ ನಾಣ್ಯ, ಮುಚ್ಚಳ ಮೊದಲಾದ ವಸ್ತುಗಳನ್ನು ಮಕ್ಕಳಿಂದ ಸಾಧ್ಯವಾದಷ್ಟು ದೂರ ಇರಿಸಿದರೆ ಇಂತಹ ಅನಾಹುತಗಳು ನಡೆಯದಂತೆ ತಡೆಯಬಹುದು.