ಬೆಂಗಳೂರು: ಶೇರ್ ಹ್ಯಾಶ್ ಅಪ್ಲಿಕೇಶನ್ ಮೂಲಕ ಹೀಲಿಯಂ ಕ್ರಿಪ್ಟೋ ಟೋಕನ್ ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದಂತೆ ಹೆಚ್ಚಿನ ಲಾಭಾಂಶವನ್ನು ನೀಡುವ ಕ್ರಿಪ್ಟೋ ಮೈನಿಂಗ್ ಯಂತ್ರವನ್ನು ನೀಡುವುದಾಗಿ ನಂಬಿಸಿ ಕೋಟ್ಯಾಂತರ ರೂ ಗಳನ್ನು ಸಾರ್ವಜನಿಕರಿಂದ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡುತ್ತಿದ್ದ ಜಾಲವನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಾಲದಲ್ಲಿದ್ದ ನಾಲ್ವರು ಖದೀಮರನ್ನು ಬಂಧಿಸಿ 44 ವಿವಿದ ಬ್ಯಾಂಕ್ ಖಾತೆಗಳಲ್ಲಿದ್ದ ಸುಮಾರು 15 ಕೋಟಿ ರೂ ಹಣ,1 ಕೆಜಿ 650 ಗ್ರಾಂ ತೂಕದ ಚಿನ್ನ ಹಾಗೂ 78 ಲಕ್ಷ ನಗದು ಹಣ ಸೇರಿ 17 ಕೋಟಿ ರೂಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಜಾಲದಲ್ಲಿದ್ದ ರಮೇಶ್ ಉಲ್ಲಾ ಖಾನ್ ,ಶೀತಲ್ ಬಸ್ತ್ವಾಡ್,ಇಮ್ರಾನ್ ರಿಯಾಜ್ ಹಾಗೂ ಜಬೀಉಲ್ಲಾ ಖಾನ್ ಬಂಧಿತ ಆರೋಪಿಗಳಾಗಿದ್ದಾರೆ.
ಕಳೆದ 2021ರ ಕೋವಿಡ್-19 ಲಾಕ್ ಡೌನ್ ವೇಳೆ ಸಾರ್ವಜನಿಕರ ವಾಟ್ಸ್ ಆ್ಯಪ್ ಗ್ರೂಪ್ ಹಾಗೂ ಎಸ್ ಎಂಎಸ್ ಮೂಲಕ
ಶೇರ್ ಹ್ಯಾಶ್ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಂಡು ಶೇರ್ ಹ್ಯಾಶ್ ಅಪ್ಲಿಕೇಶನ್ ಮೂಲಕ ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದಂತೆ ಹೆಚ್ಚಿನ ಲಾಭಾಂಶವನ್ನು ನೀಡುವ ಕ್ರಿಪ್ಟೋ ಮೈನಿಂಗ್ ಯಂತ್ರವನ್ನು ನೀಡುವುದಾಗಿ ನಂಬಿಸಿ ಸಾರ್ವಜನಿಕರು ಗೂಗಲ್ ಪ್ಲೇ ಸ್ಟೋರ್ ಮೂಲಕ ಶೇರ್ ಹ್ಯಾಶ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿಕೊಂಡು ಖಾತೆಯನ್ನು ತೆರೆದು ತಮ್ಮ ಉಳಿತಾಯ ಬ್ಯಾಂಕ್ ಖಾತೆಯಿಂದ ಯುಪಿಐ ಮತ್ತು ನೆಟ್ ಬ್ಯಾಂಕಿಂಗ್ ಮೂಲಕ ಬೆಂಗಳೂರು ಹಾಗೂ ವಿವಿದ ರಾಜ್ಯಗಳಲ್ಲಿ ನೊಂದಣಿಯಾಗಿರುವ ಕಂಪನಿಗಳಾದ ಕೋಟಾಟ ಟೆಕ್ನಾಲಜಿ, ಶಿರಾಲೀನ್ ಟೆಕ್ ಸೆಲ್ಯೂಶನ್,ನೀಲನ್ ಇನ್ಪೋಟೆಕ್ ಪ್ರೈ ಲಿಮಿಟೆಡ್,ಮೋಲ್ಟರ್ಸ್ ಎಕ್ಸಿಮ್ ಪ್ರೈ ಲಿಮಿಟೆಡ್,ಹಾಗೂ ಕ್ರಾಫಿನೇಷನ್ ಕಂಪನಿಗಳ ಬ್ಯಾಂಕ್ ಖಾತೆಗೆ ಸಾರ್ವಜನಿಕರಿಂದ ಕೋಟಿಗಟ್ಟಲೆ ಹಣವನ್ನು ಹೂಡಿಕೆ ಮಾಡಿಸಿಕೊಳ್ಳಲಾಗಿತ್ತು.
ಬಳಿಕ 2022 ರ ಜ.11ರಂದು ಶೇರ್ ಹ್ಯಾಶ್ ಅಪ್ಲಿಕೇಶನ್ ದೋಷಯುಕ್ತ ವ್ಯವಸ್ಥೆಯನ್ನು ಹೊಂದಿದೆ ಮತ್ತು ಹೊಸ ವೈಶಿಷ್ಟ್ಯಗಳೊಂದಿಗೆ ತಮ್ಮ ಅಪ್ಲಿಕೇಶನ್ ಅನ್ನು ಅಪ್ಗ್ರೇಡ್ ಮಾಡುವ ಅಗತ್ಯವಿದೆ ಎಂದು ಘೋಷಿಸಿತು. ರಿಟರ್ನ್ ಗಳನ್ನು ಇನ್-ಆಪ್ ವ್ಯಾಲೆಟ್ಗೆ ಕ್ರೆಡಿಟ್ ಮಾಡಲಾಗುತ್ತಿದೆ ಹಾಗೂ 2022 ರ ಜನವರಿ 18 ಅಥವಾ 19 ರೊಳಗೆ ಬಿಡುಗಡೆ ಮಾಡಬೇಕಿದ್ದ ಹೊಸ ಅಪ್ಲಿಕೇಶನ್ ಶೇರ್ ಹ್ಯಾಶ್ 2.0 ಬಿಡುಗಡೆಯಾದ ನಂತರ ಸಾರ್ವಜನಿಕರಿಂದ ಹೂಡಿಕೆಯ ಹಣವನ್ನು ಮತ್ತು ಹೂಡಿಕೆ ಮಾಡಿದ್ದ ಬ್ಯಾಂಕ್ ಖಾತೆಗಳಿಗೆ ಸಂಗ್ರಹವಾದ ರಿಟರ್ನ್ ಗಳನ್ನು ಹಿಂಪಡೆಯಲು ಸಕ್ರಿಯಗೊಳಿಸುವುದಾಗಿ ಭರವಸೆ ನೀಡಿರುತ್ತಾರೆ.
ಅದರಂತೆ ಹೂಡಿಕೆದಾರರು ಜ.19ರಂದು ಶೇರ್ ಹ್ಯಾಶ್ 2.0 ಅಪ್ಲಿಕೇಶನ್ ಲಾಗಿನ್ ಆಗಲು ಸಾಧ್ಯವಾಗಿರುವುದಿಲ್ಲ ಹಾಗೂ ಗೂಗಲ್ ಪ್ಲೇ ಸ್ಟೋರ್ ನಿಂದಲೂ ಶೇರ್ ಹ್ಯಾಶ್ 2.0 ಅಪ್ಲಿಕೇಶನ್ ಅನ್ನು ತೆಗೆದು ಹಾಕಲಾಗಿರುತ್ತಾರೆ. ಮೇಲ್ಕಂಡ ಕಂಪನಿಗಳು ಸಾರ್ವಜನಿಕರಿಂದ ಕೋಟಿಗಟ್ಟಲೆ ಹಣವನ್ನು ಕಂಪನಿಯ ಖಾತೆಗಳಿಗೆ ಹೂಡಿಕೆ ಮಾಡಿಸಿಕೊಂಡು ಯಾವುದೇ ಆದಾಯವನ್ನಾಗಲೀ ಹಾಗೂ ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದಂತೆ ಹೆಚ್ಚಿನ ಲಾಭಾಂಶವನ್ನು ನೀಡುವ ಕ್ರಿಪ್ಟೋ ಮೈನಿಂಗ್ ಯಂತ್ರವನ್ನು ನೀಡದೆ ಮೋಸ ಮಾಡಿದ್ದ ದೂರಿನ ಮೇರೆಗೆ ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧಿಸಿದಂತೆ ಸಿಸಿಬಿ ಡಿಸಿಪಿ ಡಾ.ಶರಣಪ್ಪ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದು ತಂಡವು ಕಾರ್ಯಾಚರಣೆ ಕೈಗೊಂಡು ಜಾಲವನ್ನು ಭೇದಿಸಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಸಾರ್ವಜನಿಕರಿಂದ ವಂಚಿಸಿದ ಹಣವು 44 ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿದ್ದು ಖಾತೆಗಳಲ್ಲಿದ್ದ ಸುಮಾರು 15 ಕೋಟಿ ಹಣವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಜೊತೆಗೆ 1 ಕೆಜಿ 650 ಗ್ರಾಂ ಚಿನ್ನ 2. 78 ಲಕ್ಷ ರೂ ನಗದು ಹಣ 44 ಡಿಎಸ್ಸಿ ಇರುವ ಟೋಕನ್ಗಳು,ಕಂಪನಿಗಳಿಗೆ ಸಂಬಂದಿಸಿದ 5 ಸೀಲುಗಳು, ಮೊಬೈಲ್ ಫೋನ್ ಹಾಗೂ ಲ್ಯಾಪ್ಟಾಪ್ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಜಂಟಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ, ಉಪ ಪೊಲೀಸ್ ಆಯುಕ್ತ ಡಾ.ಶರಣಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿದ್ದರು.