ಹನುಮಾನ್ ಚಾಲೀಸಾ ಪಠಿಸಲು ಅನುಮತಿ ಅಗತ್ಯ: ನಾಸಿಕ್ ಪೊಲೀಸ್ ಕಮಿಷನರ್

Prasthutha|

►ಆಝಾನ್ ನ 15 ನಿಮಿಷ ಮೊದಲು ಮತ್ತು ನಂತರ ಭಜನೆ, ಹನುಮಾನ್ ಚಾಲೀಸಾಗೆ ಅನುಮತಿಯಿಲ್ಲ

- Advertisement -

ಮುಂಬೈ: “ಹನುಮಾನ್ ಚಾಲೀಸಾ ಅಥವಾ ಭಜನೆ ಹೇಳಲು ಅನುಮತಿ ಪಡೆಯಬೇಕು. ಅಜಾನ್ ನ 15 ನಿಮಿಷ ಮೊದಲು ಮತ್ತು ನಂತರ ಇದನ್ನು ಅನುಮತಿಸಲಾಗುವುದಿಲ್ಲ. ಮಸೀದಿಯ 100 ಮೀಟರ್ ವ್ಯಾಪ್ತಿಯೊಳಗೆ ಹನುಮಾನ್ ಚಾಲೀಸಾ ಅಥವಾ ಭಜನೆ ಹಾಡುವಂತಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಈ ಆದೇಶದ ಉದ್ದೇಶವಾಗಿದೆ ಎಂದು ನಾಸಿಕ್ ಪೊಲೀಸ್ ಕಮಿಷನರ್ ದೀಪಕ್ ಪಾಂಡೆ ತಿಳಿಸಿದ್ದಾರೆ.

ಎಲ್ಲಾ ಧಾರ್ಮಿಕ ಸ್ಥಳಗಳು ಮೇ 3 ರೊಳಗೆ ಧ್ವನಿವರ್ಧಕಗಳ ಬಳಕೆಗೆ ಅನುಮತಿ ಪಡೆಯುವಂತೆ ಸೂಚಿಸಲಾಗಿದೆ. ಮೇ 3 ರ ನಂತರ, ಯಾರಾದರೂ ಆದೇಶವನ್ನು ಉಲ್ಲಂಘಿಸಿರುವುದು ಕಂಡುಬಂದರೆ, ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದೀಪಕ್ ಪಾಂಡೆ ಎಚ್ಚರಿಕೆ ನೀಡಿದ್ದಾರೆ.

- Advertisement -

ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಧ್ವನಿವರ್ಧಕ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಅಜಿತ್ ಪವಾರ್, ನ್ಯಾಯಾಲಯದ ಆದೇಶದ ಬಗ್ಗೆ ರಾಜ್ಯ ಸರ್ಕಾರ ಚರ್ಚಿಸುತ್ತದೆ ಮತ್ತು ಈ ಬಗ್ಗೆ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಅವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.

ಮಸೀದಿಗಳ ಧ್ವನಿವರ್ಧಕಗಳನ್ನು ನಿಷೇಧಿಸುವಂತೆ ಮಹಾರಾಷ್ಟ್ರದಲ್ಲಿ, ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ  ಬೆದರಿಕೆ ಹಾಕಿದ ಬೆನ್ನಲ್ಲೆ ಪೊಲೀಸ್ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ.



Join Whatsapp