ಬೆಂಗಳೂರು: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅಶಾಂತಿ ಸೃಷ್ಟಿಸುವ ಮತ್ತು ಕೋಮು ಗಲಭೆ ನಡೆಸುವ ಏಕೈಕ ಉದ್ದೇಶದೊಂದಿಗೆ ಸಂಘಪರಿವಾರದ ಕಿಡಿಗೇಡಿಯೊಬ್ಬ ಕೋಮು ಪ್ರಚೋದನಕಾರಿ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟು ಇನ್ನೊಂದು ಸಮುದಾಯ ಕೆರಳುವಂತ ಮಾಡಿದ ಪೈಶಾಚಿಕ ಕೃತ್ಯವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಲವಾಗಿ ಖಂಡಿಸುತ್ತದೆ ಎಂದು ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿದ್ದಾರೆ.
ಪ್ರಚೋದನಾಕಾರಿ ಪೋಸ್ಟ್ ಹರಿಯಬಿಟ್ಟ ಕಿಡಿಗೇಡಿಯನ್ನು ಮತ್ತು ಆ ಕೃತ್ಯವನ್ನು ಮಾಡಲು ಪ್ರಚೋದಿಸಿದ ಕಾಣದ ಕೈಗಳಿಗೆ ಕಾನೂನಿನ ಬೇಡಿಯನ್ನು ಹಾಕುವಂತೆ ಒತ್ತಾಯಿಸಿ ಅಲ್ಲಿನ ಸ್ಥಳೀಯರು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಎದುರು ನಡೆಸಿದ ಶಾಂತಿಯುತ ಪ್ರತಿಭಟನೆಯ ಸಂದರ್ಭದಲ್ಲಿ ಯಾರೋ ದುಷ್ಕರ್ಮಿಗಳು ಕಲ್ಲುಗಳನ್ನು ಎಸೆದಿದ್ದು ಪ್ರತಿಭಟನೆಯ ದಿಕ್ಕು ತಪ್ಪಿಸಲಾಗಿದೆ. ಈ ಘಟನೆಯನ್ನು ನೆಪವಾಗಿಟ್ಟುಕೊಂಡು ಸಂಪೂರ್ಣ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿ ಪೊಲೀಸರು ನಡೆಸುತ್ತಿರುವ ದಾಳಿ ಖಂಡನಾರ್ಹ . ಕೆಲ ಮಾಧ್ಯಮಗಳಲ್ಲಿ ಪ್ರತಿಭಟನಕಾರರನ್ನು ವಿಲನ್ ಗಳಾಗಿ ಬಿಂಬಿಸುತ್ತಿರುವುದು ಅತ್ಯಂತ ಖೇದಕರ ಎಂದು ಅಬ್ದುಲ್ ಮಜೀದ್ ಅಭಿಪ್ರಾಪಟ್ಟಿದ್ದಾರೆ .
ಪೊಲೀಸ್ ಇಲಾಖೆ ಘಟನೆಗೆ ಕಾರಣಕರ್ತರಾದ ನೈಜ ಕಿಡಿಗೇಡಿಗಳನ್ನು ಬಂಧಿಸದೆ ಮುಸ್ಲಿಂ ಸಮುದಾಯದ ಅಮಾಯಕ ಯುವಕರನ್ನು ಬಂಧಿಸುತ್ತಿರುವುದು ಗಮನಿಸಿದರೆ, ಇದು ಎಂದಿನಂತೆ ಪೊಲೀಸ್ ಇಲಾಖೆಯ ಪೂರ್ವಗ್ರಹ ಪೀಡಿತ ಕ್ರಮದ ಮುಂದುವರಿದ ಭಾಗವಾಗಿದೆ. ಘಟನೆಯ ನೆಪವೊಡ್ಡಿ ರಾತ್ರಿ ಹೊತ್ತು ಅಮಾಯಕರ ಮನೆಗಳಿಗೆ ಪೊಲೀಸರು ನುಗ್ಗಿ ವೃದ್ಧರು, ಮಹಿಳೆಯರು , ಮಕ್ಕಳಿಗೆ ಅನಗತ್ಯ ತೊಂದರೆ ನೀಡುತ್ತಿರುವುದನ್ನು ನಿಲ್ಲಿಸಬೇಕು. ಸಮಾಜದಲ್ಲಿ ಸ್ವಾಸ್ಥ್ಯ ಕದಡುತ್ತಿರುವ ಮತ್ತು ಅದಕ್ಕೆ ಪ್ರೇರಣೆ ನೀಡುತ್ತಿರುವ ನೈಜ ಕಿಡಿಗೇಡಿಗಳನ್ನು ಹುಡುಕಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಿದರೆ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ಆದ್ದರಿಂದ ಈ ನಿಟ್ಟಿನಲ್ಲಿ ಹುಬ್ಬಳ್ಳಿ ಪೊಲೀಸ್ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಅಬ್ದುಲ್ ಮಜೀದ್ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.