ಪುತ್ತೂರು: ದೇಶದಲ್ಲಿ ನಡೆಯುತ್ತಿರುವ ಮುಸ್ಲಿಮರ ಮೇಲಿನ ಹಿಂಸಾಚಾರ, ದಾಳಿಯನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ಪುತ್ತೂರು ವತಿಯಿಂದ ಎ.ಸಿ ಕಚೇರಿ ಮುಂಭಾಗದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರಿಯಾಝ್ ಬಳಕ್ಕ, ದೇಶದಲ್ಲಿ ಅಂಬೇಡ್ಕರ್ ರವರ ಸಂವಿಧಾನವನ್ನು ಬುಡಮೇಲು ಮಾಡಿಕೊಂಡು ಮನುವಾದಿಗಳು ಮುಸಲ್ಮಾನರ ವಿರುದ್ಧ ಹಿಂಸಾಚಾರ ಕೃತ್ಯಗಳು ನಡೆಸುತ್ತಿದ್ದಾರೆ, ನೈಜ ಹಿಂದೂಗಳು ರಾಮನವಮಿ ಹಬ್ಬವನ್ನು ಭಕ್ತಿಯಿಂದ ಆಚರಿಸಿದರೆ ಹಿಂದುತ್ವವಾದಿಗಳು ಮುಸಲ್ಮಾನರ ವಿರುದ್ಧ ದೌರ್ಜನ್ಯ, ಹಿಂಸಾಚಾರ ನಡೆಸಿ, ಮುಸಲ್ಮಾನರ ವಿರುದ್ಧ ಪ್ರಚೋದನಕಾರಿ ಘೋಷಣೆ ಕೂಗಿ ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ.
ಪುತ್ತೂರಿನಲ್ಲಿ ಹಿಂದುತ್ವವಾದಿಗಳು ಮುಸಲ್ಮಾನರ ವ್ಯಾಪಾರಕ್ಕೆ ಬಹಿಷ್ಕಾರ ಹಾಕಿದ್ದಾರೆ, ಆದರೆ ಮುಸಲ್ಮಾನರ ವ್ಯಾಪಾರ ಪಡೆಯುವ ಹಿಂದೂ ಮಾಲೀಕತ್ವದ ಅಂಗಡಿಗಳು ಯಾಕೆ ಮುಸಲ್ಮಾನರ ವ್ಯಾಪಾರ ಬಹಿಷ್ಕಾರ ಮಾಡಲಿಲ್ಲ, ಏಕೆಂದರೆ ಮುಸಲ್ಮಾನರಿಂದಲೇ ಅತೀ ಹೆಚ್ಚಿನ ವ್ಯಾಪಾರ ವಹಿವಾಟು ನಡೆಯುವುದು ವಾಸ್ತವವಾಗಿದೆ ಎಂದು ಹೇಳಿದರು.
ಹಿಂದೂ ಧರ್ಮದ ಒಬ್ಬ ರೋಗಿಗೆ ಅವಶ್ಯವಿದ್ದ ರಕ್ತವನ್ನು ರಂಝಾನ್ ಉಪವಾಸ ಇದ್ದು ಮುಸಲ್ಮಾನ ಸಹೋದರ ರಕ್ತದಾನ ಮಾಡಿ ಮಾದರಿಯಾಗಿದ್ದು, ಇದಾಗಿದೆ ನಮ್ಮ ಸೌಹಾರ್ದ ಭಾರತ. ಈ ನಿಟ್ಟಿನಲ್ಲಿ ದೇಶದ ಪ್ರಜ್ಞಾವಂತ ನಾಗರಿಕರು, ನೈಜ ಹಿಂದೂಗಳು ನಕಲಿ ಹಿಂದುತ್ವವಾದಿಗಳ ಆಕ್ರಮಣಕಾರಿ ಕೃತ್ಯಗಳನ್ನು ಎದುರಿಸಬೇಕು, ಸೌಹಾರ್ದ ಭಾರತ ನಿರ್ಮಾಣ ಮಾಡಲು ಎಲ್ಲರೂ ಜೊತೆಯಾಗಬೇಕು ಎಂದರು.
ಉಸ್ಮಾನ್ ಎ.ಕೆ ಪ್ರಾಸ್ತಾವಿಕವಾಗಿ ಮಾತನಾಡಿ ದೇಶದಲ್ಲಿ ಮುಸಲ್ಮಾನರ ಮೇಲೆ ನಡೆಯುತ್ತಿರುವ ಹಿಂಸಾಚಾರ, ದಾಳಿಗಳ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಪಿಎಫ್ಐ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಕೆಮ್ಮಾಯಿ, ಜಿಲ್ಲಾ ಸಮಿತಿ ಸದಸ್ಯರಾದ ರಫೀಕ್ ಎಂ.ಎಸ್, ಸಿಟಿ ಡಿವಿಝನ್ ಅಧ್ಯಕ್ಷರಾದ ಉಮ್ಮರ್ ಕೂರ್ನಡ್ಕ, ಕುಂಬ್ರ ಡಿವಿಝನ್ ಅಧ್ಯಕ್ಷರಾದ ಶಾಕಿರ್ ಕಟ್ಟತ್ತಾರ್, ಸವಣೂರು ಡಿವಿಝನ್ ಅಧ್ಯಕ್ಷರಾದ ಬಾತಿಷ್ ಬಡಕ್ಕೋಡಿ, ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷರಾದ ಹಮೀದ್ ಸಾಲ್ಮರ ಮುಂತಾದವರು ಉಪಸ್ಥಿತರಿದ್ದರು. ಇಕ್ಬಾಲ್ ಮುರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.