ಕಳೆದ ತಿಂಗಳು ಹಲವು ಟ್ವಿಟರ್ ಮತ್ತು ಫೇಸ್ ಬುಕ್ ಬಳಕೆದಾರರು ಮಹಿಳೆಯೊಬ್ಬರ ಮೃತದೇಹ ಸೂಟ್ ಕೇಸ್ ನಲ್ಲಿ ಪತ್ತೆಯಾದ ಮೂರು ಫೋಟೊಗಳನ್ನು ವ್ಯಾಪಕವಾಗಿ ಶೇರ್ ಮಾಡಿದ್ದರು. ಈ ಫೋಟೊಗಳ ಜೊತೆ ಒಂದು ಬರಹ ಪ್ರಕಟವಾಗಿತ್ತು. ಅದರಲ್ಲಿ, “ಒಂದು ಕಾಲದಲ್ಲಿ ಈಕೆ ಓರ್ವ ಜಿಹಾದಿಯ ಹೃದಯದಲ್ಲಿದ್ದಳು, ಈಗ ಸತ್ತು ಸೂಟ್ ಕೇಸ್ ನೊಳಗಿದ್ದಾಳೆ. ಜಾತ್ಯತೀತ ಹೆಣ್ಣೊಬ್ಬಳು ಸಂತ್ರಸ್ತೆಯಾಗಿದ್ದಾಳೆ. ನಿಮ್ಮ ಕಣ್ಣು ತೆರೆಯಿರಿ, ಇಲ್ಲವಾದರೆ ಲವ್ ಜಿಹಾದ್ ನಲ್ಲಿ ನೀವು ಸಾಯುತ್ತಿರುತ್ತೀರಿ’’ ಎಂದು ಪ್ರಕಟಿಸಲಾಗಿತ್ತು.
ಈ ಟ್ವೀಟ್ ಗಳು 1,000 ರಿಟ್ವೀಟ್ ಆಗಿದ್ದವು. ಅದೇ ರೀತಿ ಫೇಸ್ ಬುಕ್ ನಲ್ಲೂ ಪ್ರಕಟವಾಗಿತ್ತು. ಶಿವ್ ಸೇ ಸಂತನ್ ಎಂಬ ಫೇಸ್ ಬುಕ್ ಪೇಜ್ ನಲ್ಲಿ ಇದೇ ಫೋಟೊಗಳನ್ನು ಬಳಸಿದ್ದು, ಜೊತೆಗೆ ಇತ್ತೀಚೆಗೆ ತನಿಷ್ಕ್ ಸಂಸ್ಥೆಯ ಅಂತರ್ ಧರ್ಮೀಯ ಸಂಬಂಧದ ಜಾಹೀರಾತಿನ ಫೋಟೊಗಳನ್ನೂ ಬಳಸಿಕೊಳ್ಳಲಾಗಿದೆ. ಒಟ್ಟಿನಲ್ಲಿ ಇದೊಂದು ‘ಲವ್ ಜಿಹಾದ್’ ಪ್ರಕರಣಕ್ಕೆ ಬಲಿಯಾದ ಮಹಿಳೆ ಎಂಬುದನ್ನು ಬಿಂಬಿಸಲು ಮಾಡಿದ ಪೋಸ್ಟ್ ಆಗಿತ್ತು.
ಆದರೆ, ‘ಆಲ್ಟ್ ನ್ಯೂಸ್’ ತನಿಖಾ ವರದಿಯಲ್ಲಿ ಇದೊಂದು ‘ಲವ್ ಜಿಹಾದ್’ ಪ್ರಕರಣಕ್ಕೆ ಸಂಬಂಧಿಸಿದ ಫೋಟೊ ಅಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.
ಪಂಜಾಬ್ ಕೇಸರಿ ಮತ್ತು ದೈನಿಕ್ ಭಾಸ್ಕರ್ ನಲ್ಲಿ ಈ ಬಗ್ಗೆ ಅಕ್ಟೋಬರ್ ನಲ್ಲಿ ವರದಿಯಾಗಿದೆ. ವರದಿಗಳ ಪ್ರಕಾರ, ಹರ್ಯಾಣದ ಸಿರ್ಸಾ ಜಿಲ್ಲೆಯ ದಿಂಗ್ ನಗರದಲ್ಲಿ ಈ ಘಟನೆ ನಡೆದಿದೆ. ಆರಂಭಿಕ ವರದಿಗಳ ಪ್ರಕಾರ, ಅಪರಿಚಿತ ಮಹಿಳೆಯ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದ ಬಗ್ಗೆ ತಿಳಿಸಲಾಗಿತ್ತು.
‘ಆಲ್ಟ್ ನ್ಯೂಸ್’ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದು, ಅವರ ಪ್ರಕಾರ, ಮೃತ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ತನಿಖೆ ಇನ್ನೂ ನಡೆಯುತ್ತಿದೆ ಎಂದು ತಿಳಿದುಬಂದಿದೆ. ‘ಲವ್ ಜಿಹಾದ್’ ಸಾಧ್ಯತೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಪೊಲೀಸರು, ಅಂತರ್ ಧರ್ಮೀಯ ಘರ್ಷಣೆಗೆ ಸಂಬಂಧಿಸಿ ಯಾವುದೇ ಸಾಕ್ಷ್ಯ ಲಭ್ಯವಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಸ್ಥಳೀಯ ವರದಿಗಾರರೊಬ್ಬರ ಜೊತೆ ಮಾತನಾಡಲಾಗಿದ್ದು, ಕೋಮು ಭಾವನೆಯಿಂದ ಹತ್ಯೆ ಮಾಡಲಾದ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ ಎಂಬುದನ್ನು ಅವರೂ ಒಪ್ಪಿಕೊಂಡಿದ್ದಾರೆ.
‘ಆಲ್ಟ್ ನ್ಯೂಸ್’ ಪರಿಶೀಲಿಸಿದ ಇತರ ಎಲ್ಲಾ ಮೂಲಗಳ ಪ್ರಕಾರ, ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಪಾದಿಸಲಾದಂತೆ ಮುಸ್ಲಿಂ ವ್ಯಕ್ತಿಯು ಹಿಂದೂ ಮಹಿಳೆಯನ್ನು ಹತ್ಯೆ ಮಾಡಿದ್ದಾನೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಹೀಗಾಗಿ ಇದೊಂದು ತನಿಖೆ ಇನ್ನೂ ಮುಂದುವರಿದ ಪ್ರಕರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾದ ವಿಷಯ ಸತ್ಯವಲ್ಲ.