ಬೆಂಗಳೂರು: ಉಡುಪಿ ಶಾಂಭವಿ ಲಾಡ್ಜಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವನ್ನು ಪಡೆದುಕೊಳ್ಳುತ್ತಿದೆ. ಸಾವಿನ ಮುಂಚೆ ಸಂತೋಷ್ ರವಾನಿಸಿದ ವಾಟ್ಸಾಪ್ ಸಂದೇಶಕ್ಕೆ ತಲೆದಂಡವಾಗಿ ಸಚಿವ ಈಶ್ವರಪ್ಪ ನಿನ್ನೆ ರಾಜೀನಾಮೆ ಘೋಷಿಸಿದ್ದು ಬಂಧನದ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದೀಗ ರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಸಂತೋಷ್ ಅವರಿಗೆ ಕೇಸರಿ ಶಾಲು ಹಾಕುವ ಚಿತ್ರವೊಂದು ಸಾಮಾಜಿಕ ವಲಯದಲ್ಲಿ ವೈರಲ್ ಆಗುತ್ತಿದ್ದು ಈ ಸಾವಿಗೆ ಮುತಾಲಿಕ್ ಯಾಕೆ ಮೌನ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಈ ಹಿಂದೆ ಶಿವವೊಗ್ಗದಲ್ಲಿ ಕೊಲೆಯಾದ ಹರ್ಷ ಹತ್ಯೆಗೆ ಸಂಬಂಧಿಸಿ ಮುತಾಲಿಕ್ ಹಲವು ಕಡೆ ಉದ್ರೇಕಕಾರಿ ಹೇಳಿಕೆ ನೀಡಿದ್ದು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದರು. ಆದರೆ ಸಂತೋಷ್ ಪ್ರಕರಣದಲ್ಲಿ ಮುತಾಲಿಕ್ ಮೌನ ವಹಿಸಿದ್ದು ಸಾರ್ವಜನಿಕ ವಲಯಗಳಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಹಿಂದುತ್ವ ಎಂದು ಕಿರುಚಾಡುವವರು, ಪ್ರಕರಣದಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದರೆ ಸುಮ್ಮನಾಗುತ್ತಾರೆ ಎಂದು ನೆಟ್ಟಿಗರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ