ಮುಂಬೈ: ಮೇ 3ರ ಒಳಗಾಗಿ ಮಸೀದಿಗಳ ಧ್ವನಿವರ್ಧಕಗಳನ್ನು ತೆಗೆದುಹಾಕದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ವಿರುದ್ಧ ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆದಿತ್ಯ ಠಾಕ್ರೆ, ಧ್ವನಿವರ್ಧಕ ಕಿತ್ತುಹಾಕುವ ಬದಲು ಏರುತ್ತಿರುವ ಹಣದುಬ್ಬರ, ಪೆಟ್ರೋಲ್, ಡೀಸೆಲ್, ಸಿಎನ್ಜಿರ ಬೆಲೆಗಳ ಬಗ್ಗೆ ಮಾತನಾಡಬೇಕು. 60 ವರ್ಷಗಳ ಹಿಂದೆ ಏನು ನಡೆದಿದೆ ಎಂದು ಹೇಳುವ ಬದಲು ಕಳೆದ ಎರಡು ಮೂರು ವರ್ಷಗಳಲ್ಲಿ ಏನಾಗಿದೆ ಎಂದು ನಾವು ಚರ್ಚೆ ಮಾಡಬೇಕು” ಎಂದು ಆಕ್ರೋಶಗೊಂಡರು.
ಧ್ವನಿವರ್ಧಕಗಳ ಬಗೆಗಿನ ರಾಜ್ ಠಾಕ್ರೆ ಹೇಳಿಕೆ ಬಳಿಕ ರಾಜ್ಯ ರಾಜಕೀಯ ಕಾವೇರಿದೆ. ಮೇ 3ರ ಒಳಗಾಗಿ ಮಸೀದಿಗಳಿಂದ ಧ್ವನಿವರ್ಧಕ ತೆಗೆಸದಿದ್ದರೆ, ಎಂಎನ್ಎಸ್ ಕಾರ್ಯಕರ್ತರು ಧ್ವನಿವರ್ಧಕಗಳನ್ನು ಮಸೀದಿಗಳ ಹೊರಗೆ ಅಳವಡಿಸಿ ಹನುಮಾನ್ ಚಾಲೀಸ್ ಪಠಿಸಲಿದ್ದಾರೆ ಎಂದು ರಾಜ್ ಠಾಕ್ರೆ ಎಚ್ಚರಿಕೆ ನೀಡಿದ್ದರು.