ಸ್ವಪಕ್ಷದ ನಾಯಕರ ವಿರುದ್ಧ ಹಾರ್ದಿಕ್ ಪಟೇಲ್‌ ತೀವ್ರ ವಾಗ್ದಾಳಿ

Prasthutha|

ಗುಜರಾತ್ ಕಾಂಗ್ರೆಸ್‌ನ ಕಾರ್ಯಕಾರಿ ಅಧ್ಯಕ್ಷರಾಗಿರುವ ಹಾರ್ದಿಕ್‌ ಪಟೇಲ್‌ ಸ್ವಪಕ್ಷದ ಮೇಲೆಯೇ ತೀವ್ರ ವಾಗ್ದಾಳಿ ನಡೆಸಿದ್ದಾರೆ.

- Advertisement -

“ರಾಜ್ಯ ಕಾಂಗ್ರೆಸ್‌ ಸಮಿತಿಯ ಯಾವುದೇ ಸಭೆಗಳಿಗೆ ನನ್ನನ್ನು ಆಹ್ವಾನಿಸುತ್ತಿಲ್ಲ. ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ನನ್ನ ಅಭಿಪ್ರಾಯ ಪಡೆಯಲಾಗುತ್ತಿಲ್ಲ. ರಾಜ್ಯ ಮಟ್ಟದ ನಾಯಕರು ನನ್ನನ್ನು ಸಂಪರ್ಕಿಸುವುದಿಲ್ಲ. ಹೀಗಿದ್ದಾಗ ನನ್ನ ಕಾರ್ಯಾಧ್ಯಕ್ಷ ಹುದ್ದೆಯ ಔಚಿತ್ಯವೇನು?” ಎಂದು ಹಾರ್ದಿಕ್ ಪಟೇಲ್‌ ಪ್ರಶ್ನಿಸಿದ್ದಾರೆ.

“ಪಕ್ಷದಲ್ಲಿ ಸಂತಾನಹರಣಕ್ಕೊಳಗಾದ ನವವಿವಾಹಿತನ ಪರಿಸ್ಥಿತಿ ನನ್ನದು. ರಾಜ್ಯ ಕಾಂಗ್ರೆಸ್‌ ಘಟಕಕ್ಕೆ ಇತ್ತೀಚೆಗೆ 75 ನೂತನ ಪ್ರಧಾನ ಕಾರ್ಯದರ್ಶಿಗಳು ಮತ್ತು 25 ಉಪಾಧ್ಯಕ್ಷರನ್ನು ಘೋಷಿಸಲಾಗಿದೆ. ಈ ಆಯ್ಕೆಯ ವೇಳೆಯೂ ನನ್ನನ್ನು ಯಾರೂ ಸಂಪರ್ಕಿಸಿಲ್ಲ” ಎಂದು ಗುಜರಾತ್‌ನ ಪ್ರಮುಖ ಪಾಟಿದಾರ್‌ ಸಮುದಾಯದ ಮುಖಂಡರೂ ಆಗಿರುವ ಹಾರ್ದಿಕ್ ಹೇಳಿದ್ದಾರೆ.

- Advertisement -

2015ರ ಪ್ರಕರಣವೊಂದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ತನ್ನ ವಿರುದ್ಧದ ಶಿಕ್ಷೆಗೆ ತಡೆ ನೀಡಿದ ಬಳಿಕ ಹಾರ್ದಿಕ್ ಪಟೇಲ್‌ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಖೋಡಲ್‌ಧಾಮ್ ಟ್ರಸ್ಟ್ ಅಧ್ಯಕ್ಷ ಮತ್ತು ಪ್ರಬಲ ಪಾಟಿದಾರ್ ನಾಯಕ ನರೇಶ್ ಪಟೇಲ್ ಅವರನ್ನು ರಾಜ್ಯದ ಎಲ್ಲಾ ಪಕ್ಷಗಳು ಸಂಪರ್ಕಿಸಿ ಪಕ್ಷಕ್ಕೆ ಸೇರಲು ಆಹ್ವಾನಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಮಾತ್ರ ಈ ವಿಚಾರದಲ್ಲಿ ವಿಳಂಬ ಮಾಡುತ್ತಿದ್ದಾರೆ. ಇದು ಇಡೀ ಸಮುದಾಯಕ್ಕೆ ಮಾಡಿದ ಅವಮಾನ. 2015ರ ಸ್ಥಳೀಯ ಸಂಸ್ಥೆ ಮತ್ತು 2017ರ ವಿಧಾನಸಭೆ ಚುನಾವಣೆಯಲ್ಲಿ ಪಾಟಿದಾರ್ ಹೋರಾಟದಿಂದಾಗಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿತ್ತು ಎಂಬುದನ್ನು ಮರೆಯಬಾರದು. 2017ರಲ್ಲಿ 182 ಸದಸ್ಯ ಬಲದ ಸದನದಲ್ಲಿ ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದಿತ್ತು. ಆದರೆ ಅದರ ನಂತರ ಏನಾಯಿತು ಎಂದು ಹಾರ್ದಿಕ್‌ ಪ್ರಶ್ನಿಸಿದ್ದಾರೆ.

2020ರಲ್ಲಿ ಸ್ವತಃ ರಾಹುಲ್ ಗಾಂಧಿ ಅವರಿಂದಲೇ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡ ಹಾರ್ದಿಕ್, ಈ ಹಿಂದೆಯೂ ಪಕ್ಷದಲ್ಲಿ ಪ್ರಮುಖ ಸ್ಥಾನಮಾನ ನೀಡದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. 

ಈ ಕುರಿತು ಪ್ರತಿಕ್ರಿಯಿಸಿರುವ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಠಾಕೂರ್, ಹಾರ್ದಿಕ್‌ ಪಟೇಲ್‌ ಅವರ ಜೊತೆ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ.



Join Whatsapp