ಐಪಿಎಲ್ 2022| ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್ ಶರ್ಮಾಗೆ 24 ಲಕ್ಷ ರೂಪಾಯಿ ದಂಡ !

Prasthutha|

ಮುಂಬೈ: ಐಪಿಎಎಲ್‌ನ 15ನೇ ಆವೃತ್ತಿಯಲ್ಲಿ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಒಂದರ ಮೇಲೊಂದರಂತೆ ಸಮಸ್ಯೆಗಳು ಅಂಟಿಕೊಳ್ಳುತ್ತಿವೆ.

- Advertisement -

ಸರಣಿ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್‌ಗೆ ಇದೀಗ ʻಗಾಯದ ಮೇಲೆ ಬರೆʼ ಎಂಬಂತೆ ಭಾರಿ ಮೊತ್ತದ ದಂಡ ವಿಧಿಸಲಾಗಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೆಶನ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡ ಕಾರಣಕ್ಕಾಗಿ ನಾಯಕ ರೋಹಿತ್ ಶರ್ಮಾ ಸೇರಿದಂತೆ ಮುಂಬೈ ತಂಡದ 11 ಆಟಗಾರರರಿಗೆ ದಂಡ ವಿಧಿಸಲಾಗಿದೆ.

ನಾಯಕ ರೋಹಿತ್ ಶರ್ಮಾಗೆ 24 ಲಕ್ಷ ರೂಪಾಯಿ ಮತ್ತು ಉಳಿದ 10 ಸದಸ್ಯರಿಗೆ ತಲಾ 6 ಲಕ್ಷ ರೂಪಾಯಿ  ಅಥವಾ ಅವರ ಪಂದ್ಯದ ಶುಲ್ಕದ 25 ಪ್ರತಿಶತ ದಂಡ ವಿಧಿಸಲಾಗಿದೆ. ಆಡಿರುವ 5 ಪಂದ್ಯಗಳಲ್ಲಿ ಎರಡನೇ ಬಾರಿ ಮುಂಬೈ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. 

- Advertisement -

ಐಪಿಎಲ್ ನಿಯಮಾವಳಿಗಳ ಪ್ರಕಾರ ತಂಡವೊಂದು ಮೊದಲ ಬಾರಿಗೆ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡರೆ ನಾಯಕನಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿಗೆ ಇದೇ ತಪ್ಪನ್ನು ಪುನರಾವರ್ತಿಸಿದರೆ ದಂಡದ ಮೊತ್ತ ದ್ವಿಗುಣಗೊಳ್ಳುತ್ತದೆ. ಹೀಗಾಗಿ ಮುಂಬೈ ತಂಡದ ನಾಯಕನಿಗೆ 24 ಲಕ್ಷ ರೂಪಾಯಿ ದಂಡ ವಿಧಿಸಿದೆ. 

ಮೂರನೇ ಬಾರಿಗೆ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡರೆ ಒಂದು ಪಂದ್ಯದಿಂದ ನಿಷೇಧ ಹೇರಲಾಗುತ್ತದೆ. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಮುಂದಿನ ದಿನಗಳಲ್ಲಿ ಪಂದ್ಯಗಳನ್ನು ಗೆಲ್ಲುವುದರ ಜೊತೆಗೆ ನಿಗದಿತ ಸಮಯದೊಳಗೆ ಇನ್ನಿಂಗ್ಸ್ ಮುಗಿಸುವುದರ ಕುರಿತೂ ಗಮನಹರಿಸಬೇಕಾಗಿದೆ.



Join Whatsapp