ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ: ಸಚಿವ ಈಶ್ವರಪ್ಪ ವಜಾಕ್ಕೆ ಪ್ರಿಯಾಂಕ್ ಖರ್ಗೆ ಆಗ್ರಹ

Prasthutha|

ಕಲ್ಬುರ್ಗಿ: ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಶಾಸಕ ಪ್ರಿಯಾಂಕ್ ಖರ್ಗೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

- Advertisement -

ಮಾತ್ರವಲ್ಲ ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆಗೆ ಸರ್ಕಾರ ನೇರ ಕಾರಣ. ಡೆತ್ ನೋಟ್ ನಲ್ಲಿ ಸಚಿವ ಈಶ್ವರಪ್ಪನವರ ಹೆಸರನ್ನು ಸೂಚಿಸಿರುವುದರಿಂದ ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಪ್ರಸಕ್ತ ಗುತ್ತಿಗೆದಾರ ಈ ಹಿಂದೆಯೇ ಸರ್ಕಾರ ಶೇಕಡಾ 40 ರಷ್ಟು ಕಮಿಷನ್ ಗಾಗಿ ಬೇಡಿಕೆ ಇಟ್ಟಿರುವ ಕುರಿತು ಪ್ರಧಾನಿಗೆ ಪತ್ರ ಬರೆದಿದ್ದರು. ಇದರ ಹೊರತಾಗಿಯೂ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಪ್ರತಿಯೊಂದಕ್ಕೂ ಸರ್ಕಾರ ದಾಖಲೆ ಕೇಳುತ್ತಿದೆ. ಇದೀಗ ಸರ್ಕಾರದ ಕಮಿಷನ್ ದುರಾಸೆಗೆ ಜೀವವೊಂದು ಹೋಗಿದೆ. ಇದಕ್ಕಿಂತ ಮೇಲಿನ ಪುರಾವೆ ಬೇಕಾ? ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.

- Advertisement -

ರಾಜ್ಯವನ್ನಾಳುವ ಮುಖ್ಯಮಂತ್ರಿ ಬೊಮ್ಮಾಯಿ ಅವರು ಆರೆಸ್ಸೆಸ್ ನ ಕೈಗೊಂಬೆಯಾಗಿದ್ದು, ಅಸಹಾಯಕರಾಗಿದ್ದಾರೆ. ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳದ ಅವರು ಸಚಿವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರಾ? ಅವರು ತನ್ನ ಖುರ್ಚಿಗಾಗಿ ನಾಡಿನ ಜನರ ಹಿತವನ್ನು ಬಲಿ ಕೊಡುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.



Join Whatsapp