ಬೆಂಗಳೂರು:ಬಿಜೆಪಿಯ ಬೆಂಬಲಿಗರಾದ ಎಚ್ಎಂಟಿ ಲೇಔಟ್ ನ ಸಂದೇಶ್ ಅವರ ಮನೆಗೆ ತೆರಳಿ ಪ್ರೆಷರ್ ಕುಕ್ಕರ್ ನೀಡಿ, ತಮ್ಮ ಪರ ಮತ ಚಲಾಯಿಸುವಂತೆ ತೋಟಗಾರಿಕೆ ಸಚಿವ ಮುನಿರತ್ನ ಮತ್ತು ಅವರ ಬೆಂಬಲಿಗರಾದ ಸುನಂದಾ ಬೋರೇಗೌಡ 2018ರ ರಾಜರಾಜೇಶ್ವರಿ ವಿಧಾನಸಭಾ ಚುನಾವಣೆ ವೇಳೆ ಕೋರಿದ್ದರು ಎಂದು ಹಾಲಿ ವಿಧಾನ ಪರಿಷತ್ನ ಬಿಜೆಪಿ ಸದಸ್ಯ ಹಾಗೂ ಅಂದಿನ ಪರಾಜಿತ ಅಭ್ಯರ್ಥಿ ಪಿ ಎಂ ಮುನಿರಾಜು ಗೌಡ ಅವರು ಸೋಮವಾರ ಕರ್ನಾಟಕ ಹೈ ಕೋರ್ಟ್ ನಲ್ಲಿ ಸಾಕ್ಷಿ ನುಡಿದರು.
2018ರ ವಿಧಾನಸಭೆ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುನಿರತ್ನ ಗೆಲ್ಲಲು ಚುನಾವಣಾ ಅಕ್ರಮಗಳನ್ನು ಎಸಗಿರುವ ಕಾರಣ ಅವರ ಅಂದಿನ ಆಯ್ಕೆಯನ್ನು ಜನತಾ ಪ್ರತಿನಿಧಿ ಕಾಯಿದೆ–1951ರ ಕಲಂ 123ರ ಅನುಸಾರ ಅನೂರ್ಜಿತಗೊಳಿಸಬೇಕು ಎಂದು ಕೋರಿರುವ ಮನವಿಯ ಮೂರನೇ ದಿನದ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.
ಅರ್ಜಿದಾರರ ಪರ ವಕೀಲ ಎಂ ಶಿವಪ್ರಕಾಶ್ ಅವರ ಪ್ರಶ್ನೆಗಳಿಗೆ “ಮುನಿರತ್ನ ಅವರು ತಮ್ಮ ಬೆಂಬಲಿಗರೊಂದಿಗೆ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮತದಾರರ ಮನೆಗಳಿಗೆ ಖುದ್ದಾಗಿ ತೆರಳಿ ಕುಕ್ಕರ್, ಸೀರೆ ಮತ್ತು ವಾಟರ್ ಕ್ಯಾನ್ ಗಳನ್ನು ಹಂಚಿದ್ದರು” ಎಂದರು.
ಇದಕ್ಕೆ ಪೀಠವು “ನೀವು ದಿನಾಂಕಗಳನ್ನು ಇಷ್ಟೊಂದು ಕರಾರುವಕ್ಕಾಗಿ ಹೇಗೆ ಹೇಳುತ್ತಿದ್ದೀರಿ” ಎಂದು ಪ್ರಶ್ನಿಸಿತು. ಆಗ ಮುನಿರಾಜುಗೌಡ ಅವರು “ನನ್ನ ಜ್ಞಾಪಕಶಕ್ತಿಯ ಆಧಾರದಲ್ಲಿ ಇದನ್ನೆಲ್ಲಾ ಹೇಳುತ್ತಿದ್ದೇನೆ ಮತ್ತು ಹೇಳುವುದನ್ನು ಸಾಕ್ಷ್ಯದ ಮೂಲಕ ಗುರುತಿಸಲೂ ಸಿದ್ಧನಿದ್ದೇನೆ” ಎಂದರು.
ಇದಕ್ಕೆ ನ್ಯಾಯಮೂರ್ತಿಗಳು, “ಮುನಿರತ್ನ ಕುಕ್ಕರ್, ಸೀರೆ ಹಂಚಿದ್ದರ ಬಗ್ಗೆ ನೀವು ಸಾಕ್ಷಿ ನುಡಿಯುತ್ತಿದ್ದೀರಿ. ಆದರೆ, ಇದಕ್ಕೆ ಏನು ಸಾಕ್ಷ್ಯ ಒದಗಿಸಿದ್ದೀರಿ” ಎಂದು ಪ್ರಶ್ನಿಸಿತು. ಇದಕ್ಕೆ ಸ್ಪಷ್ಟನೆ ನೀಡಿದ ಶಿವಪ್ರಕಾಶ್ ಅವರು “ಸಾಕ್ಷ್ಯಗಳ ಪಟ್ಟಿ ನೀಡಿಕೆಯಲ್ಲಿ ಈ ಅಂಶ ಸೇರ್ಪಡೆಯಾಗಿಲ್ಲ” ಎಂದರು.
ಇದನ್ನು ಒಪ್ಪದ ಪೀಠವು “ಇದೊಂದು ಅಪರಾಧಿಕ ಅರೆ ನ್ಯಾಯಿಕ ವಿಚಾರಣೆ. ಇಂತಹ ವಿಚಾರಣೆಯಲ್ಲಿ ಸಾಕ್ಷ್ಯ ಕಾಯಿದೆಯ ಅನ್ವಯವೇ ನೀವು ನಡೆದುಕೊಳ್ಳಬೇಕು. ಸಾಕ್ಷಿ ನುಡಿಯುತ್ತಿರುವ ಸಾಮಾನುಗಳ ಪಟ್ಟಿ ಮತ್ತು ದಾಖಲೆಗಳನ್ನು ಪೀಠಕ್ಕೆ ಒದಗಿಸಬೇಕು” ಎಂದು ತಾಕೀತು ಮಾಡಿತು.
“ಚುನಾವಣಾ ಅಧಿಸೂಚನೆ ಹೊರಡಿಸಲಾದ 2018ರ ಮಾರ್ಚ್ 27ಕ್ಕೂ ಮುನ್ನವೇ ಮುನಿರತ್ನ ಅವರು ರಾಜರಾಜೇಶ್ವರಿ ನಗರ ಕ್ಷೇತ್ರದ ಒಂಬತ್ತು ಪೊಲೀಸ್ ಠಾಣೆ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿನ ಚುನಾವಣಾ ಸಿಬ್ಬಂದಿ ಯಾರೆಲ್ಲಾ ತಮ್ಮ ಪರವಾಗಿ ಕೆಲಸ ಮಾಡಬೇಕೊ ಅಂತಹವರನ್ನೆಲ್ಲಾ ಉಳಿಸಿಕೊಳ್ಳುವ ಪೂರ್ವಭಾವಿ ತಯಾರಿ ಮಾಡಿಕೊಂಡಿದ್ದರು” ಎಂದು ಮುನಿರಾಜುಗೌಡ ಹೇಳಿದರು. ಸಾಕ್ಷಿ ಹೇಳಿಕೆ ದಾಖಲಿಸಿಕೊಂಡ ಪೀಠವು ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದೆ.
(ಕೃಪೆ: ಬಾರ್ & ಬೆಂಚ್)