ಬೆಂಗಳೂರು: ಅಸಂಘಟಿತ ವ್ಯಾಪಾರಿಗಳಿಗೆ ಧರ್ಮದ ಆಧಾರದಲ್ಲಿ ಅಡ್ಡಿಪಡಿಸುತ್ತಿರುವ ಮತಾಂಧ ದುರುಳರ ಕುಕೃತ್ಯ ಖಂಡನೀಯ. ಇಂತಹ ಕುಕೃತ್ಯಗಳನ್ನು ನಿಲ್ಲಿಸದಿದ್ದರೆ ಕಾರ್ಮಿಕರೆಲ್ಲರೂ ಒಟ್ಟಾಗಿ ಹೋರಾಟ ನಡೆಸಬೇಕಾಗುತ್ತದೆ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (ಎಸ್.ಡಿ.ಟಿ.ಯು) ರಾಜ್ಯಾಧ್ಯಕ್ಷ ಅಬ್ದುಲ್ ರಹೀಮ್ ಪಟೇಲ್ ಎಚ್ಚರಿಸಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬೆಲೆ ಏರಿಕೆ ನಿಯಂತ್ರಿಸಲಾಗದ ಸರ್ಕಾರದ ಜನವಿರೋಧಿ ನೀತಿಗಳನ್ನು ಜನರು ಚರ್ಚಿಸಬಾರದು ಎಂಬ ದುರುದ್ದೇಶದಿಂದ ಹಿಜಾಬ್, ಹಲಾಲ್/ ಜಟ್ಕಾ ವಿವಾದ, ಮುಸ್ಲಿಮೇತರರ ಆಟೋ, ಟ್ಯಾಕ್ಸಿ ಗಳಲ್ಲಿ ಬಾಡಿಗೆ ಸಂಚರಿಸಬಾರದು, ಇತ್ಯಾದಿ ಮತಾಂಧತೆಯ ವಿಷ ಬೀಜ ಬಿತ್ತಿ ಸಮಾಜವನ್ನು ಒಡೆಯುವ ಮತ ಧ್ರುವೀಕರಣಕ್ಕೆ ಬಿಜೆಪಿ ಮತ್ತು ಸಂಘಪರಿವಾರ ಪ್ರಯತ್ನಿಸುತ್ತಿದೆ. ಗದಗದಲ್ಲಿ ಮುಸ್ಲಿಮ್ ಬೀದಿ ಬದಿ ವ್ಯಾಪಾರಿಗಳ ಅಂಗಡಿಯನ್ನು ಧ್ವಂಸಗೈದ ಶ್ರೀರಾಮ ಸೇನೆಯ ಪುಂಡರು, ಮಂಗಳೂರಿನಲ್ಲಿ ದೇವಸ್ಥಾನ ಸಮೀಪ ಮುಸ್ಲಿಮ್ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎಂಬ ಕೋಮು ವೈಷಮ್ಯ ಹರಡಿದ ಬಜರಂಗದಳದ ದುರುಳರು ಮತ್ತು ಪುತ್ತೂರು ಮತ್ತು ಪೊಳಲಿಯಲ್ಲಿ ಆಟೋ ಚಾಲಕರನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಹಿಂ ಜಾ.ವೇದಿಕೆಯ ಮತಾಂಧರನ್ನು ಹದ್ದು ಬಸ್ತಿನಲ್ಲಿಡಲು ಪೋಲಿಸ್ ಇಲಾಖೆಗೆ ಸಾಧ್ಯವಿಲ್ಲವೇ ಎಂದು ಅವರು ಪ್ರಶ್ನಿಸಿದರು.
ಮತಾಂಧ ಶಕ್ತಿಗಳು ಹರಡಿದ ವಿಷದಿಂದಾಗಿ ಸಮಾಜದಲ್ಲಿ ಅರಾಜಕತೆ ಸೃಷ್ಟಿಯಾದಾಗ ಇದರ ಬಲಿಪಶು ದುಡಿದು ತಿನ್ನುವ ಬಡ ಮಧ್ಯಮ ಶ್ರಮಿಕ ವರ್ಗವಾಗಿದೆ. ಅಸಂಘಟಿತ ಕಾರ್ಮಿಕರೆಲ್ಲರೂ ಸರ್ಕಾರದ ತಪ್ಪು ನೀತಿಗಳಿಂದ ತನ್ನ ಜೀವನದುದ್ದಕ್ಕೂ ಸಂಕಷ್ಟ ಅನುಭವಿಸುತ್ತಿರುವಾಗ ದುಡಿದು ತಿನ್ನುವ ಕಾರ್ಮಿಕರನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ರಾಜಕೀಯ ಲಾಭ ಗಳಿಸುವ ಹುನ್ನಾರ ನಿಲ್ಲಿಸದಿದ್ದರೆ ಕಾರ್ಮಿಕರೆಲ್ಲರೂ ಒಟ್ಟಾಗಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಸ್.ಡಿಟಿಯು ರಾಜ್ಯಾಧ್ಯಕ್ಷ ಅಬ್ದುಲ್ ರಹೀಮ್ ಪಟೇಲ್ ಎಚ್ಚರಿಸಿದ್ದಾರೆ