ಧರ್ಮ, ನ್ಯಾಯ, ಶಾಂತಿ ಹಾಗೂ ಎಲ್ಲರೂ ಒಂದಾಗಿ ಸಾಗಲು ಧ್ವನಿ ಎತ್ತಬೇಕು: ಮಠಾಧೀಶರಿಗೆ ಡಿ.ಕೆ. ಶಿವಕುಮಾರ್ ಮನವಿ

Prasthutha|

ಬೆಂಗಳೂರು: ಇಂದು ದೇಶದಲ್ಲಿ ಅಶಾಂತಿ, ಕೋಮು ಸಂಘರ್ಷ, ಗಲಭೆ, ಅಧರ್ಮ ಹೆಚ್ಚುತ್ತಿದ್ದು, ಇದನ್ನು ನೋಡಿಕೊಂಡು ಸ್ವಾಮೀಜಿಗಳು, ಮಠಾಧೀಶರು ಕಣ್ಣುಮುಚ್ಚಿಕೊಂಡು ಕೂರಬಾರದು. ಧರ್ಮ, ನ್ಯಾಯ, ಶಾಂತಿ ಹಾಗೂ ಎಲ್ಲರೂ ಒಂದಾಗಿ ಸಾಗಲು ಧ್ವನಿ ಎತ್ತಬೇಕು ಎಂದು ಮಠಾಧೀಶರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.

- Advertisement -

ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ನಡೆದ ಮುರುಘಾ ಶರಣರ ಹುಟ್ಟುಹಬ್ಬದ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಹಾಭಾರತದ ಹಸ್ತಿನಾಪುರ ರಾಜಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣ ಆಗುತ್ತಿರುವ ಸಂದರ್ಭದಲ್ಲಿ ಭೀಷ್ಮ, ದ್ರೋಣಾಚಾರ್ಯರಂತಹ ಅತಿರಥರು ಉಪಸ್ಥಿತರಿದ್ದರು. ಆಗ ಅಲ್ಲಿ ಅಧರ್ಮ ನಡೆಯುತ್ತಿದ್ದರೂ ಅವರೆಲ್ಲರೂ ಮೌನವಾಗಿ ಕಣ್ಣುಮುಚ್ಚಿ ಕುಳಿತಿದ್ದರು ಎಂದು ಡಿ.ಕೆ. ಶಿವಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಇಂದು ಅಶಾಂತಿ ಮೂಡಿದೆ. ನಾವಿಂದು ಸಮಾನತೆ ದಿನ ಆಚರಿಸುತ್ತಿದ್ದು, ಮಠಗಳು ಸಮಾನತೆಯ ಅಡಿಪಾಯವಾಗಿವೆ. ಯಾವುದೇ ವ್ಯಕ್ತಿ ಆತ ಯಾವುದೇ ಜಾತಿ, ಧರ್ಮದವನಾಗಿದ್ದರೂ ಅವನು ಮಾನವೀಯತೆಯಿಂದ ಬದುಕಲು, ಅವನ ನೆಮ್ಮದಿಯ ಬದುಕಿಗೆ ನೀವು ಆಶೀರ್ವಾದ ಮಾಡಬೇಕು. ಅವನ ಪರ ಧ್ವನಿ ಎತ್ತಬೇಕು. ರಾಜ್ಯದಲ್ಲಿ ಶಾಂತಿ ಸ್ಥಾಪಿಸಲು ಪ್ರಯತ್ನಿಸಬೇಕು ಎಂದು ಕಳಕಳಿಯಿಂದ ಪ್ರಾರ್ಥಿಸುತ್ತೇನೆ ಎಂದು ಅವರು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

- Advertisement -

ಇದೊಂದು ಪವಿತ್ರವಾದ ದಿನ. ಪುರಂದರ ದಾಸರು ಒಂದು ಮಾತು ಹೇಳುತ್ತಾರೆ. ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ, ಪದುಮನಾಭನ ಪಾದ ಭಜನೆ ಪರಮ ಸುಖವಯ್ಯ ಎಂದು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನ್ನ ಭಾಗ್ಯ. ಇಂದು ನಾವೆಲ್ಲರೂ ಶ್ರೀ ಶಿವಮೂರ್ತಿ ಮುರುಘಾ ಶರಣರ ಜನ್ಮದಿನವನ್ನು ಆಚರಣೆ ಮಾಡುತ್ತಿದ್ದು, ಇದು ನಮ್ಮೆಲ್ಲರ ಭಾಗ್ಯ ಎಂದು ತಿಳಿಸಿದ್ದಾರೆ.

ನಾನಿಲ್ಲಿಗೆ ಶರಣರ ಪಾದ ಸ್ಪರ್ಶಕ್ಕೆ ಬಂದಿದ್ದೇನೆ. ಕಾವೇರಿ, ಮೇಕೆದಾಟು ಪಾದಯಾತ್ರೆ ಮಾಡಿದಾಗ, ಎಷ್ಟೋ ಸ್ವಾಮೀಜಿಗಳು ಹೆದರಿ ಭಾಗವಹಿಸಲಿಲ್ಲ. ಆದರೆ ಮುರುಘಾ ಮಠದ ಸ್ವಾಮಿಗಳು ರಾಜ್ಯದ ಹಿತಕ್ಕಾಗಿ, ರಾಜ್ಯದ ನೀರಿಗಾಗಿ ಒಂದು ಡಜನ್ ಗೂ ಹೆಚ್ಚು ಸ್ವಾಮೀಜಿಗಳನ್ನು ಕರೆದುಕೊಂಡು ಬಂದು ಆಶೀರ್ವಾದ ಮಾಡಿದರು. ಅದನ್ನು ನಾನು ನನ್ನ ಜೀವನದುದ್ದಕ್ಕೂ ಮರೆಯುವುದಿಲ್ಲ. ನಾನು ನಿಮಗೆ ಸದಾ ಶರಣಾಗಿರುತ್ತೇನೆ ಎಂದು ಹೇಳುತ್ತೇನೆ. ಕಷ್ಟಕಾಲದಲ್ಲಿ ನಮಗೆ ಯಾರು ಧೈರ್ಯ ಕೊಟ್ಟು, ಸ್ಫೂರ್ತಿ ಕೊಟ್ಟು ಆಶೀರ್ವಾದ ಮಾಡುತ್ತಾರೋ ಅದು ಬಹಳ ಮುಖ್ಯ ಎಂದು ಅವರು ತಿಳಿಸಿದ್ದಾರೆ.

ನೊಂದ ಎಲ್ಲ ಸಮಾಜಗಳಿಗೂ ಪೀಠ ಸ್ಥಾಪನೆ ಮಾಡಿ ಎಲ್ಲರೂ ಸಮಾನತೆಯಿಂದ ಬಾಳಲು, ಬಸವಣ್ಣನವರ ಹಾದಿಯಲ್ಲಿ ಹೆಜ್ಜೆ ಹಾಕಿದ್ದರೆ, ಅದು ಮುರುಘಾ ಮಠದ ಶ್ರೀಗಳು ಎಂದು ಅನೇಕ ಸ್ವಾಮೀಜಿಗಳು ಹೇಳಿದ ಮಾತನ್ನು ನಾನು ಒಪ್ಪುತ್ತೇನೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ನಾವು ಧರ್ಮ ಬೇಡ ಎಂದು ಎಷ್ಟೇ ಹೇಳಿದರು, ಧರ್ಮ ನಮ್ಮನ್ನು ಬಿಡುವುದಿಲ್ಲ. ನಾವು ಹುಟ್ಟುವಾಗ ನಮ್ಮ ಧರ್ಮ ಯಾವುದು ಎಂದು ಗೊತ್ತಿರುವುದಿಲ್ಲ. ಹೆಸರಿಡುತ್ತಾರೆ, ಉಡದಾರ ಹಾಕುತ್ತಾರೆ, ಮೂಗು ಚುಚ್ಚಿಸುತ್ತಾರೆ, ಎಲ್ಲವೂ ಧರ್ಮವೇ. ನಂತರ ನಾವು ಯಾವುದೇ ಧರ್ಮ ಬೇಡ ಎಂದರು ಒಂದು ಕಡೆ ಅಕ್ಕಿ, ಮತ್ತೊಂದು ಕಡೆ ಅರಿಶಿಣ ಸೇರಿ ಮಂತ್ರಾಕ್ಷತೆ ಆಗುವಂತೆ ಧರ್ಮ ನಮ್ಮನ್ನು ಬೆಸೆದುಕೊಳ್ಳುತ್ತದೆ. ನಾವು ಸತ್ತಾಗ ಅಂತ್ಯ ಸಂಸ್ಕಾರ ಮಾಡುವಾಗ ನಮ್ಮ ಧರ್ಮ ನೋಡುತ್ತಾರೆ. ಹೀಗೆ ನೀವು ಧರ್ಮ ಬಿಟ್ಟರು ಧರ್ಮ ನಿಮ್ಮನ್ನು ಬಿಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಎಲ್ಲ ಮಠಗಳು ಅಕ್ಷರ, ಅನ್ನ, ಆಶ್ರಯ, ಧರ್ಮ ದಾಸೋಹವನ್ನು ಸರ್ಕಾರಕ್ಕಿಂತ ಹೆಚ್ಚಾಗಿ ಮಾಡುತ್ತಿವೆ. ಉತ್ತಮ ಸಮಾಜ ಸೇವೆ ಮಾಡುತ್ತಿವೆ. ಈ ಮಠಗಳ ಬಗ್ಗೆ ಯಾರಾದರೂ ಅನಗತ್ಯವಾಗಿ ಮಾತನಾಡಿದರೆ ಅವರಂತಹ ಮೂರ್ಖರು ಮತ್ತೊಬ್ಬರಿಲ್ಲ. ಇಂತಹ ಮಠಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ.



Join Whatsapp