ನವದೆಹಲಿ: ರಾಮನವಮಿ ಪ್ರಯುಕ್ತ ನಡೆದ ಮೆರವಣಿಗೆಯ ವೇಳೆ ಗುಜರಾತ್, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ದೇಶದ 4 ರಾಜ್ಯಗಳಲ್ಲಿ ಕೋಮು ಘರ್ಷಣೆ ಉಂಟಾಗಿದ್ದು, ಈ ಪೈಕಿ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಹಲವು ಮನೆಗಳು ಬೆಂಕಿಗಾಹುತಿಯಾಗಿವೆ.
ರಾಮನವಮಿ ಮೆರವಣಿಗೆಯ ವೇಳೆ ಮಧ್ಯಪ್ರದೇಶದ ಖಾರ್ಗೋನ್ ಎಂಬಲ್ಲಿ ನಡೆದ ಹಿಂಸಾಚಾರದಲ್ಲಿ ಹಲವು ಮನೆಗಳಿಗೆ ಬೆಂಕಿ ಹಚ್ಚಿದ ಹಿನ್ನೆಲೆಯಲ್ಲಿ ಅಲ್ಲಿನ ಕೆಲವು ಕಡೆಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯಾವುದೇ ಅನಾಹುತ ಸಂಭವಿಸದಂತೆ ತಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಧ್ವನಿವರ್ಧಕಗಳ ಮೂಲಕ ಸಂಗೀತ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ವಾಗ್ವಾದದ ಬಳಿಕ ತಲಾಬ್ ಚೌಕ್ ಎಂಬಲ್ಲಿ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದಾಗ ಘರ್ಷಣೆ ಏರ್ಪಟ್ಟಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಎಸ್. ಮಜಾಲ್ದೆ ತಿಳಿಸಿದ್ದಾರೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್ ಅನ್ನು ಪ್ರಯೋಗಿಸಬೇಕಾಯಿತು ಎಂದು ಅವರು ತಿಳಿಸಿದ್ದಾರೆ.
ವಾಹನಗಳಿಗೆ ಬೆಂಕಿ ಹಚ್ಚುವಿಕೆ, ಕಲ್ಲು ತೂರಾಟ, ಅಶ್ರುವಾಯು ಪ್ರಯೋಗದ ದೃಶ್ಯಾವಳಿಗಳು ಸೆರೆಯಾಗಿದ್ದು, ಈ ಘರ್ಷಣೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಚೌಧರಿ ಸೇರಿದಂತೆ ಹಲವು ಪೊಲೀಸರು ಗಾಯಗೊಂಡಿದ್ದಾರೆ.
ಈ ಘಟನೆಯಲ್ಲಿ ನಾಲ್ಕು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಗುಜರಾತಿನಲ್ಲಿ ಆನಂದ್ ಜಿಲ್ಲೆಯ ಖಂಭತ್ ಮತ್ತು ಸಬರ್ಕಾಂತ ಜಿಲ್ಲೆಯ ಹಿಮ್ಮತ್ ನಗರದಲ್ಲಿ ಕೋಮು ಘರ್ಷಣೆಗಳು ನಡೆದ ಬಗ್ಗೆ ವರದಿಯಾಗಿದೆ. ಎರಡೂ ಸ್ಥಳಗಳಲ್ಲಿ ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚುವಿಕೆ ನಡೆದಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್ಗಳನ್ನು ಸಿಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘರ್ಷಣೆಯ ಸಂದರ್ಭದಲ್ಲಿ ಸುಮಾರು 65 ಪ್ರಾಯದ ವಯೋವೃದ್ಧರೊಬ್ಬರು ಖಂಭಾತ್ ನಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಜೀತ್ ರಾಜ್ಯನ್ ತಿಳಿಸಿದ್ದಾರೆ.
ಹಿಮ್ಮತ್ ನಗರದಲ್ಲಿ ನಡೆದ ಘರ್ಷಣೆಯನ್ನು ನಿಯಂತ್ರಿಸಲು ಅಶ್ರುವಾಯು ಶೆಲ್ ಅನ್ನು ಪ್ರಯೋಗಿಸಬೇಕಾಯಿತು ಎಂದು ಸಬರ್ಕಾಂತ್ ಪೊಲೀಸ್ ಮುಖ್ಯಸ್ಥ ವಿಶಾಲ್ ವಘೇಲಾ ತಿಳಿಸಿದ್ದಾರೆ.
ರಾಮನವಮಿ ಪ್ರಯುಕ್ತ ಬಂಗಾಳದ ಹೌರಾದ ಶಿಬ್ಪುರ ಎಂಬಲ್ಲಿ ನಡೆದ ಘರ್ಷಣೆಯನ್ನು ನಿಯಂತ್ರಿಸಿ, ಶಾಂತಿ ಕಾಪಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾರ್ಖಂಡ್ ನ ಲೋಹರ್ಡಗಾ ಎಂಬಲ್ಲಿ ನಡೆದ ರಾಮನವಮಿ ಮೆರವಣಿಗೆ ವೇಳೆ ಉಂಟಾದ ಘರ್ಷಣೆಯ ಸಂದರ್ಭದಲ್ಲಿ ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚಿದ ಪರಿಣಾಮ ಹಲವು ಜನರು ಗಾಯಗೊಂಡಿದ್ದಾರೆ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.