ಅಂಬೇಡ್ಕರ್ ಮೆಡಿಕಲ್ ಕಾಲೇಜು ಸಂಸ್ಥಾಪಕ ಟ್ರಸ್ಟಿ ಡಾ ಶಿವಲಿಂಗಯ್ಯ ಕೊಲೆ ಯತ್ನ

Prasthutha|

ಬೆಂಗಳೂರು: ಖ್ಯಾತ ವೈದ್ಯ ಹಾಗೂ ಅಂಬೇಡ್ಕರ್ ಮೆಡಿಕಲ್ ಕಾಲೇಜು ಸಂಸ್ಥಾಪಕ ಟ್ರಸ್ಟಿ ಡಾ ಶಿವಲಿಂಗಯ್ಯರ ಕೊಲೆಗೆ ಯತ್ನ ನಡೆದಿದೆ. ಅಂಬೇಡ್ಕರ್ ಮೆಡಿಕಲ್ ಕಾಲೇಜು, ದಂತ ವೈದ್ಯ ಕಾಲೇಜು, ಅಂಬೇಡ್ಕರ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಸ್ಥಾಪಕರಾದ ಡಾ ಶಿವಲಿಂಗಯ್ಯ(92) ಅವರ ಕೊಲೆಗೆ ಯತ್ನ ನಡೆದಿದ್ದು, ಸದ್ಯ ಮಣಿಪಾಲ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -


ಅಲ್ಯೂಮಿನಿಯಂ ಅಂಶದ ಮಾತ್ರೆಗಳನ್ನು ನೀಡಿ ವಿಷ ಪ್ರಾಷನ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಮೆಡಿಕಲ್ ಟೆಸ್ಟ್ ಮಾಡಿಸಿದಾಗ ದೇಹದಲ್ಲಿ ಜೀವಕ್ಕೆ ಅಪಾಯ ಆಗುವಷ್ಟು ಅಲ್ಯೂಮಿನಿಯಂ ಅಂಶ ಪತ್ತೆಯಾಗಿದೆ. ಸಾಮಾನ್ಯವಾಗಿ 10 ಎಂಐಸಿಜಿ ಕಿಂತ ಕಡಿಮೆ ಅಲ್ಯೂಮಿನಿಯಂ ಅಂಶ ದೇಹದಲ್ಲಿ ಇರುತ್ತದೆ. ಆದರೆ ಡಾ. ಶಿವಲಿಂಗಯ್ಯರವರ ದೇಹದಲ್ಲಿ ಮಾರ್ಚ್ 4ರಂದು ಪರೀಕ್ಷೆ ಮಾಡಿಸಿದಾಗ 26.4 ಎಂಐಸಿಜಿ ನಷ್ಟು ಅಂಶ ಪತ್ತೆಯಾಗಿದೆ. ಬಳಿಕ ಮಾ.22 ರಂದು ಪರೀಕ್ಷೆ ಮಾಡಿದಾಗ 33.7 ಎಂಐಸಿಜಿ ನಷ್ಟು ಅಂಶ ಪತ್ತೆಯಾಗಿದೆ. ಇದೇ ರೀತಿ ಅಲ್ಯೂಮಿನಿಯಂ ಅಂಶ ಹೆಚ್ಚಾದಲ್ಲಿ ದೇಹ ಬಹು ಅಂಗಾಂಗಗಳ ವೈಫಲ್ಯದಿಂದ ಸಾವನ್ನಪ್ಪುವ ಸಾಧ್ಯತೆ ಇದೆ.


ಕಳೆದ ಹದಿನೈದು ವರ್ಷಗಳಿಂದ ಜೊತೆಗೆ ಇದ್ದು ಡಾ. ಶಿವಲಿಂಗಯ್ಯರನ್ನು ನೋಡಿಕೊಳ್ಳುತಿದ್ದ ಧಾನಮಣಿ ಹಾಗೂ ಕಳೆದ 26 ವರ್ಷಗಳಿಂದ ಜೊತೆಗೆ ಇದ್ದ ವೆಂಕಟೇಶ ಮೂರ್ತಿ ಅವರಿಂದ ಕೃತ್ಯ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ಡಾ ಶಿವಲಿಂಗಯ್ಯರವರ ಹೆಸರಲ್ಲಿ ಸಾವಿರಾರು ಕೋಟಿ ಬೆಲೆ ಬಾಳುವ ಆಸ್ತಿ ಇದೆ. ಮನೆಯಲ್ಲಿ ಕೋಟಿ ಕೋಟಿ ಬಾಳುವ ಚಿನ್ನ ಸಹ ಇದೆ. ಹೀಗಾಗಿ ಅವರೇ ಈ ಕೃತ್ಯ ಎಸಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಅಲ್ಲದೆ ಸದ್ಯ ಡಾ ಶಿವಲಿಂಗಯ್ಯ ಅವರ ಕಡೆಯಿಂದ ಖಾಲಿ ಛಾಪಾ ಕಾಗದಗಳಿಗೆ ಸಹಿ ಪಡೆದಿರುವುದು ಪತ್ತೆಯಾಗಿದೆ.

- Advertisement -


ಕೃತ್ಯದ ಬಗ್ಗೆ ಡಾ. ಶಿವಲಿಂಗಯ್ಯ ಪುತ್ರ ಖ್ಯಾತ ವೈದ್ಯ ಡಾ. ರವಿ ಪ್ರಕಾಶ್ ದೂರು ಸಲ್ಲಿಸಿದ್ದಾರೆ. ದೂರಿನ ಅನ್ವಯ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸೆಕ್ಷನ್ 307 ಮತ್ತು 328 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನು ಈ ಸಂಬಂಧ ಮಾತನಾಡಿರುವ ಡಾ. ರವಿ ಪ್ರಕಾಶ್, ನಮ್ಮ ತಂದೆಯವರಿಗೆ ಕಾಫಿ ಕುಡಿಯುವ ಅಭ್ಯಾಸ ಇರಲಿಲ್ಲ. ಅವರಿಗೆ ಕಾಫಿ ಅಭ್ಯಾಸ ಮಾಡಿಸಿದ್ದಾರೆ. ಅಲ್ಯೂಮಿನಿಯಂ ಕಹಿ ಇರಲಿದೆ. ಕಾಫಿಯಲ್ಲಿ ಹಾಕಿ ಕೊಟ್ಟರೆ ಗೊತ್ತಾಗಲ್ಲಾ ಎನ್ನುವ ಕಾರಣಕ್ಕಾಗಿ. ಹಂತ ಹಂತವಾಗಿ ಅಲ್ಯೂಮಿನಿಯಂ ನೀಡಲಾಗಿದೆ.

ನೂರಾರು ಕೋಟಿ ಆಸ್ತಿ ಇದೆ. ಆಕೆ ಕೇರ್ ಟೇಕರ್ ಎಂದು ಬಂದದ್ದು ಈಗ ತನ್ನನ್ನು ಮದುವೆ ಆಗಿದ್ದಾರೆ ಎಂದು ದಾಖಲಾತಿ ಮಾಡಿಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲು ಮಾಡಿ ತನಿಖೆ ನಡೆಸುತ್ತಿದ್ದಾರೆ. ಆಶ್ರಯ ಕೊಟ್ಟವರನ್ನೇ ಹಣಕ್ಕೆ ಬಳಸಿಕೊಂಡು ಕೊಲ್ಲಲು ಮುಂದಾಗಿದ್ದು ಎಷ್ಟು ಸರಿ? ಎಂದು ಡಾ ಶಿವಲಿಂಗಯ್ಯ ನವರ ಮಗ ಆಕ್ರೋಶ ಹೊರ ಹಾಕಿದ್ದಾರೆ.



Join Whatsapp