ಮುಂಬೈ : ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ ಬೃಹತ್ ಮೊತ್ತವನ್ನು ಬೆನ್ನಟ್ಟುವಲ್ಲಿ ವಿಫಲವಾದ ಕೋಲ್ಕತ್ತಾ ನೈಟ್ ರೈಡರ್ಸ್, 44 ರನ್’ಗಳ ಅಂತರದಲ್ಲಿ ಅಂತರದಲ್ಲಿ ಪಂಥ್ ಪಡೆಗೆ ಶರಣಾಗಿದೆ.
ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್, ಆರಂಭಿಕರಾದ ಪೃಥ್ವಿ ಶಾ ಮತ್ತು ಡೇವಿಡ್ ವಾರ್ನರ್ ಗಳಿಸಿದ ಬಿರುಸಿನ ಅರ್ಧಶತಕಗಳ ನೆರವಿನಿಂದ 5 ವಿಕೆಟ್ ನಷ್ಟದಲ್ಲಿ 215 ರನ್ ಗಳಿಸಿತ್ತು. ಕಠಿಣ ಗುರಿ ಪಡೆದ ಕೆಕೆಆರ್, 19.4 ಓವರ್’ಗಳಲ್ಲಿ 171 ರನ್’ಗಳಿಸುವಷ್ಟರಲ್ಲೇ ಆಲೌಟ್ ಆಯಿತು.
ಕೋಲ್ಕತ್ತಾ ಪರ ಇನ್ನಿಂಗ್ಸ್ ಆರಂಭಿಸಿದ್ದ ಅಜಿಂಕ್ಯಾ ರಹಾನೆ, ಮುಸ್ತಫಿಝುರ್ ರಹ್ಮಾನ್ ಎಸೆದ ಪ್ರಥಮ ಓವರ್’ನ ಮೊದಲ ಎರಡು ಎಸೆತಗಳಲ್ಲಿ ಫೀಲ್ಡ್ ಅಂಪೈರ್ ಔಟ್ ತೀರ್ಮಾನ ನೀಡಿದ್ದರೂ, ಡಿಆರ್,ಎಸ್ ಬಳಸಿ ವಿಕೆಟ್ ಉಳಿಸಿಕೊಂಡರು. ಮೂರನೇ ಎಸೆತದಲ್ಲಿ ಚೆಂಡು ಬ್ಯಾಟ್ ಅಂಚಿಗೆ ತಾಗಿ ಕೀಪರ್ ಕೈ ಸೇರಿದರೂ, ಬೌಲರ್-ಕೀಪರ್ ಮನವಿ ಸಲ್ಲಿಸದ ಹಿನ್ನೆಲೆಯಲ್ಲಿ ಮತ್ತೊಂದು ಜೀವದಾನ ಪಡೆದರು. ಇಷ್ಟಾಗಿಯೂ ರಹಾನೆ ಗಳಿಸಿದ್ದು ಕೇವಲ 8 ರನ್. ಮತ್ತೋರ್ವ ಆರಂಭಿಕ ವೆಂಕಟೇಶ್ ಅಯ್ಯರ್ 2 ಸಿಕ್ಸರ್ ಸಿಡಿಸಿ ಗುಡುಗಿದರೂ, 18 ರನ್’ಗಳಿಸುವಷ್ಟರಲ್ಲೇ ನಿರ್ಗಮಿಸಿದರು. ಇವರಿಬ್ಬರ ವಿಕೆಟ್ ಖಲೀಲ್ ಅಹ್ಮದ್ ಪಾಲಾಯಿತು.
ಮೂರನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಶ್ರೇಯಸ್ ಅಯ್ಯರ್ ಆಕರ್ಷಕ ಅರ್ಧಶತಕ [54] ಗಳಿಸಿದರೂ, ಉಳಿದ ಬ್ಯಾಟರ್’ಗಳಿಂದ ಬೆಂಬಲ ದೊರೆಯಲಿಲ್ಲ.
ನಿತೀಶ್ ರಾಣಾ 30 ಮತ್ತು ಆಂಡ್ರೆ ರಸೆಲ್ 24 ರನ್ ಗಳಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ಪರ ಕುಲ್ದೀಪ್ ಯಾದವ್ 4 ಮತ್ತು ಖಲೀಲ್ ಅಹ್ಮದ್ ಮೂರು ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಶಾರ್ದೂಲ್ ಠಾಕೂರ್ 2, ಲಲಿತ್ ಯಾದವ್ 1 ವಿಕೆಟ್ ಪಡೆದರು.
ಐಪಿಎಲ್ 2022 | ಕೋಲ್ಕತ್ತ ವಿರುದ್ಧ ಪಂತ್ ಪಡೆಗೆ ಭರ್ಜರಿ ಗೆಲುವು
Prasthutha|