ಹೊಸಪೇಟೆ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಲ್ಬುರ್ಗಿ, ಪನ್ಸಾರೆ, ಗೌರಿ ಲಂಕೇಶ್ ಅವರನ್ನು ಬಲಪಂಥೀಯ ಸಂಘಟನೆಗಳು, ಸನಾತನವಾದಿಗಳು ಹತ್ಯೆ ಮಾಡಿದ್ದಾರೆ. ಈಗ ಸಿದ್ದರಾಮಯ್ಯ ಸೇರಿದಂತೆ ಅನೇಕ ಸಾಹಿತಿಗಳಿಗೆ ಕೊಲೆ ಮಾಡುವುದಾಗಿ ಬೆದರಿಕೆ ಪತ್ರ ಬಂದಿದೆ. ಕಾಂಗ್ರೆಸ್ ಪಕ್ಷ ದೇಶದ ಐಕ್ಯತೆಗಾಗಿ ತ್ಯಾಗ ಬಲಿದಾನ ಮಾಡಲು ಸಿದ್ಧ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜೀವ್ ಗಾಂಧಿ, ಇಂದಿರಾಗಾಂಧಿಯವರು ಈ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ನಮಗೆ ಯಾವ ಭಯವೂ ಇಲ್ಲ ಕೋಮುವಾದಿಗಳಿಗೆ ಎದೆಯೊಡ್ಡಿ ನಿಲ್ಲಲು ನಾವು ಸಿದ್ಧರಿದ್ದೇವೆ. ಆದರೆ ಸಾಹಿತಿಗಳ ಕೂದಲು ಮುಟ್ಟಲು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಬಹಿರಂಗವಾಗಿ ಕೊಲೆ ಬೆದರಿಕೆ ಪತ್ರ ಬರುತ್ತದೆ ಅಂದರೆ ರಾಜ್ಯದ ಗೃಹ ಮಂತ್ರಿ ಮರಕೋತಿ ಆಟ ಆಡಕ್ಕೆ ಲಾಯಕ್. ಗೃಹ ಸಚಿವರೇ ಮತೀಯವಾದಿ ಸಂಘಟನೆಗಳಿಗೆ ಕುಮ್ಮಕ್ಕು ನೀಡುತ್ತಾರೆ. ಅವರ ಸಂಘಟನೆಗಳು ಬಾಲ ಬಿಚ್ಚಲು ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಇಂತಹ ಗೃಹ ಸಚಿವ ಕೂಡಲೇ ರಾಜೀನಾಮೆ ನೀಡಬೇಕು. ಮುಖ್ಯಮಂತ್ರಿಗಳು ಕ್ರಿಯೆಗೆ ಪ್ರತಿಕ್ರಿಯೆ ಸಹಜ ಅಂತಾರೆ ಇಂತವರಿಂದ ರಕ್ಷಣೆ ಸಾಧ್ಯವಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ವೆಂಕಟರಾವ್ ಘೋರ್ಪಡೆ, ರಘು ಗುಜ್ಜಲ್ ಸೇರಿದಂತೆ ಇತರರು ಭಾಗವಹಿಸಿದ್ದರು.