ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆದಿದ್ದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಸಂದರ್ಭ ಕೋಮು ಪ್ರಚೋದನಕಾರಿ ಹೇಳಿಕೆ ನೀಡಿ ಆಕ್ರೋಶಕ್ಕೆ ತುತ್ತಾಗಿದ್ದ ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಈಶ್ವರಪ್ಪ ವಿರುದ್ಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ನಿರ್ದೇಶನದಂತೆ ಪೊಲೀಸರು FIR ದಾಖಲಿಸಿದ್ದಾರೆ. ಮುಸ್ಲಿಂ ಗೂಂಡಾಗಳು ಹರ್ಷ ಕೊಲೆ ನಡೆಸಿದ್ದಾರೆ ಎಂದು ಹೇಳಿಕೆ ನೀಡಿದ್ದ ಈಶ್ವರಪ್ಪ ವಿರುದ್ಧ ಶಿವಮೊಗ್ಗ ನಿವಾಸಿ ರಿಯಾಝ್ ಅಹ್ಮದ್ ಎಂಬವರು ದೂರು ನೀಡಿದ್ದರು. ಪೊಲೀಸರು FIR ದಾಖಲಿಸಲು ನಿರಾಕರಿಸಿದ್ದರಿಂದ ರಿಯಾಝ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಸಚಿವರ ಕೋಮು ಪ್ರಚೋದನೆ ಹೇಳಿಕೆಯಿಂದಾಗಿ ಶಿವಮೊಗ್ಗದಲ್ಲಿ ಹಿಂಸಾಚಾರ ನಡೆದಿದೆ. ಈ ಕುರಿತು FIR ದಾಖಲಿಸುವಂತೆ ರಿಯಾಝ್ ಹೈಕೋರ್ಟ್ ನಲ್ಲಿ ವಾದಿಸಿದ್ದರು. ಇದೀಗ ಹೈಕೋರ್ಟ್ ನಿರ್ದೇಶನದಂತೆ ಸಚಿವ ಈಶ್ವರಪ್ಪ ವಿರುದ್ಧ FIR ದಾಖಲಾಗಿದೆ.