ವಿಜಯನಗರ: ಹಂಪಿ ಕನ್ನಡ ವಿಶ್ವ ವಿದ್ಯಾಲಯ ಪ್ರಸಕ್ತ ಸಾಲಿನ ನಾಡೋಜ ಪ್ರಶಸ್ತಿ ಪ್ರಕಟ ಮಾಡಿದ್ದು, ಸಾಹಿತಿಗಳಾದ ಗೊ.ರು. ಚನ್ನಬಸಪ್ಪ, ಭಾಷ್ಯಂ ಸ್ವಾಮಿ ಹಾಗೂ ಪ್ರೊ.ಟಿ.ವಿ. ವೆಂಕಟಾಚಲ ಶಾಸ್ತ್ರಿ ಅವರನ್ನು ನಾಡೋಜ ಗೌರವ ಪದವಿಗೆ ಆಯ್ಕೆ ಮಾಡಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸ.ಚಿ.ರಮೇಶ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ..
ಎಪ್ರಿಲ್ 12ರಂದು ಸಂಜೆ 5:30ಕ್ಕೆ ಕನ್ನಡ ವಿಶ್ವವಿದ್ಯಾನಿಲಯದ ನವರಂಗ ಬಯಲು ರಂಗಮಂದಿರದಲ್ಲಿ ನಡೆಯಲಿರುವ ‘ನುಡಿಹಬ್ಬ’ದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಾಡೋಜ ಗೌರವ ಪದವಿ ಪ್ರದಾನ ಮಾಡಲಿದ್ದಾರೆ.
ಈ ಬಾರಿಯ ಪ್ರಶಸ್ತಿ ಆಯ್ಕೆಗಾಗಿ ಸಾಹಿತಿಗಳಾದ ಜಿ. ಕೃಷ್ಣಪ್ಪ, ಮಲೆಯೂರು ಗುರುಸ್ವಾಮಿ, ಡಾ. ಎಸ್.ಸಿ. ಶರ್ಮಾ, ಗುರುಲಿಂಗ ಕಾಪಸೆ, ಡಾ. ಶಿವಾನಂದ ನಾಯಕ, ರಮೇಶ ಎಂ.ಕೆ. ನಾಸೀರ್ ಅಹಮ್ಮದ್ ಸೇರಿದಂತೆ ಒಟ್ಟು ಹತ್ತು ಜನರ ಹೆಸರನ್ನು ನಾಡೋಜಕ್ಕೆ ಶಿಫಾರಸು ಮಾಡಲಾಗಿತ್ತು. ಅಂತಿಮವಾಗಿ ರಾಜ್ಯಪಾಲರು ಮೂವರ ಹೆಸರಿಗೆ ಅಂಕಿತ ಹಾಕಿದ್ದಾರೆ.