ಸಾಲ ತೀರಿಸಲು ಬಂಡವಾಳ ಸಾಲುತ್ತಿಲ್ಲ; ಸಂಕಷ್ಟದಲ್ಲಿ ಕಾಫಿ ಡೇ ಎಂಟರ್‌ಪ್ರೈಸಸ್‌

Prasthutha|

ಬೆಂಗಳೂರು: ಕೆಫೆ ಕಾಫಿ ಡೇ ಎಂಬ ಜನಪ್ರಿಯ ಬ್ರ್ಯಾಂಡ್‌ ಹೊಂದಿರುವ ಕಾಫಿ ಡೇ ಎಂಟರ್‌ಪ್ರೈಸಸ್‌ ನ ಸಾಲಗಳ ಮರುಪಾವತಿ ಮತ್ತು ಪಟ್ಟಿ ಮಾಡದ ಸಾಲ ಭದ್ರತೆಗಳಿಗೆ ಒಟ್ಟು 479.68 ಕೋಟಿ ರೂ.ಗಳನ್ನು ಮರುಪಾವತಿಸುವಲ್ಲಿ ವಿಫಲವಾಗಿರುವುದಾಗಿ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್ ಹೇಳಿದೆ.

- Advertisement -

ಷೇರು ವಿನಿಮಯ ಮಾರುಕಟ್ಟೆಗೆ ಸಲ್ಲಿಸಿದ ದಾಖಲೆಯಲ್ಲಿ ಕಂಪನಿಯು, 224.88 ಕೋಟಿ ರೂ. ಸಾಲಗಳು, ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ನಗದು ಕ್ರೆಡಿಟ್‌ನಂತಹ ಆವರ್ತಕ ಸೌಲಭ್ಯಗಳಿಂದ ಪಡೆದುಕೊಂಡ ಹಣವನ್ನು ಮರು ಪಾವತಿಸಲು ವಿಫಲವಾಗಿದ್ದು, ಇದೇ ಸಾಲಗಳಿಗೆ ಸಂಬಂಧಿಸಿ 5.78 ಕೋಟಿ ರೂ. ಬಡ್ಡಿ ಪಾವತಿಗೂ ವಿಫಲವಾಗಿರುವುದಾಗಿ ತಿಳಿಸಿದೆ.

ಪಟ್ಟಿ ಮಾಡದ ಸಾಲ ಭದ್ರತೆಗಳಿಗೆ 200 ಕೊಟಿ ರೂ. ಪಾವತಿಸಲು ಸಾಧ್ಯವಾಗಿಲ್ಲ ಎಂದು ಕಾಫಿ ಡೇ ಎಂಟರ್‌ಪ್ರೈಸಸ್ ಹೇಳಿದೆ. ಇವು ನಾನ್‌ ಕನ್ವರ್ಟಿಬಲ್‌ ಡಿಬೆಂಚರ್ಸ್‌ ಮತ್ತು ನಾನ್‌ ಕನ್ವರ್ಟಿಬಲ್‌ ರಿಡೀಮೇಬಲ್‌ ಆದ್ಯತೆಯ ಷೇರುಗಳಾಗಿವೆ. ಸಾಲ ಭದ್ರತೆಗಳ ಸಂಬಂಧ 49.02 ಕೋಟಿ ರೂ. ಬಡ್ಡಿ ಪಾವತಿಯೂ ಸಾಧ್ಯವಾಗಿಲ್ಲ ಎಂದು ಕಂಪನಿ ತನ್ನ ಷೇರುದಾರರಿಗೆ ವಿವರ ನೀಡಿದೆ.

- Advertisement -

ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ್‌ ಕಂಪನಿಯ ಸಾಲಕ್ಕೆ ಹೆದರಿ ಕೆಲ ವರ್ಷಗಳ ಹಿಂದೆ ಮಂಗಳೂರಿನಲ್ಲಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ ಕಂಪನಿ ಸಾಲ ಸುಮಾರು 7,200 ಕೋಟಿ ರೂ. ಇತ್ತು. ಪತಿಯ ನಿರ್ಗಮನದ ನಂತರ ಕಂಪನಿ ಜವಾಬ್ದಾರಿ ವಹಿಸಿಕೊಂಡಿದ್ದ ಪತ್ನಿ ಮಾಳವಿಕಾ ಹೆಗಡೆ ಕಳೆದ ಜನವರಿ ವೇಳೆಗೆ ಕಂಪನಿಯ ಸಾಲವನ್ನು 3,100 ಕೋಟಿ ರೂಪಾಯಿಗೆ ಇಳಿಸಿದ್ದರು. ಆದರೆ ಎಲ್ಲಾ ಸಾಲವನ್ನು ಪಾವತಿಸಲು ಕಂಪನಿಗೆ ಇನ್ನೂ ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.



Join Whatsapp