ಹುಬ್ಬಳ್ಳಿ: ಸ್ನೇಹಾ ದಮಾಮ್‌ಘರ್ ಮತ್ತು ಇಬ್ರಾಹಿಂ ಸಯ್ಯದ್ ಎಂಬವರ ಅಂತರ್ ಧರ್ಮೀಯ ವಿವಾಹಕ್ಕೆ ಲವ್ ಜಿಹಾದ್ ಬಣ್ಣ ನೀಡಿದ್ದ ಸಂಘಪರಿವಾರ ಹೆತ್ತವರೊಂದಿಗೆ ಸೇರಿಕೊಂಡು ಠಾಣೆಗೆ ಮುತ್ತಿಗೆ ಹಾಕಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಈ ಕುರಿತು ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದು, ಘಟನೆ ಸಾಕಷ್ಟು ಕುತೂಹಲ ಮೂಡಿಸಿದೆ.
ತಮ್ಮ ಮಗಳನ್ನು ಬಲವಂತದ ಮೂಲಕ ನಕಲಿ ಸಹಿಯನ್ನು ಪಡೆದುಕೊಂಡು ಲವ್ ಜಿಹಾದ್ ಖೆಡ್ಡಾಕ್ಕೆ ಬೀಳಿಸಲಾಗಿದೆ ಎಂದು ಆರೋಪಿಸಿದ ಘೋಷಕರು ಮಗಳನ್ನು ಹಿಂದಿರುಗಿಸುವಂತೆ ಒತ್ತಾಯಿಸಿದ್ದಾರೆ.
ಫೆಬ್ರವರಿ 11 ಗದಗದಲ್ಲಿರುವ ಸಬ್ – ರಿಜಿಸ್ಟರ್ ಕಚೇರಿಯಲ್ಲಿ ಈ ದಂಪತಿ ಸ್ವ-ಇಚ್ಛೆಯಿಂದ ವಿವಾಹವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಧ್ಯೆ ಘಟನೆಯ ಕುರಿತು ಪ್ರತಿಕ್ರಿಯಿಸಿದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ನಕಲಿ ದಾಖಲೆಗಳೊಂದಿಗೆ ಮದುವೆಯನ್ನು ನೋಂದಾಯಿಸಿರುವ ಗದಗ ಸಬ್ ರಿಜಿಸ್ಟ್ರಾರ್ ಅವರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ .
ಗುರುವಾರ ಬಾಲಕಿಯನ್ನು ಆಕೆಯ ಕುಟುಂಬಕ್ಕೆ ಹಸ್ತಾಂತರಿಸದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಮತ್ತು ಮುಂದಿನ ಪರಿಣಾಮಗಳಿಗೆ ಪೊಲೀಸರೇ ಹೊಣೆಯಾಗಬೇಕಾಗುತ್ತದೆ ಎಂದು ಮುತಾಲಿಕ್ ಎಚ್ಚರಿಸಿದ್ದಾರೆ.