ಮುಂಬೈ: ದೇಶದ ಹಲವೆಡೆ ಬೊಗಸೆ ನೀರಿಗಾಗಿ ಹಾಹಾಕಾರ ಎದ್ದಿದೆ. ಬೇಸಿಗೆ ತಾಪಮಾನ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳನ್ನು ತತ್ತರಿಸುವಂತೆ ಮಾಡಿದೆ. ಈ ಮಧ್ಯೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆ ಭಾಗದ ನೀರಿನ ಬವಣೆ ಎದ್ದು ಕಾಣುವಂತಾಗಿದೆ.
ಬೊಗಸೆ ನೀರಿಗಾಗಿ ಮಹಿಳೆಯೋರ್ವಳು ಆಳ ಬಾವಿಗಿಳಿಯುತ್ತಿರುವ ವೀಡಿಯೋ ಅದಾಗಿದ್ದು, ಮಹಿಳೆಯು ಬಾವಿಗೆ ಕಟ್ಟಲಾದ ಕಲ್ಲುಗಳನ್ನು ಹಿಡಿದು ಆ ಮೂಲಕ ಕುಡಿಯುವ ನೀರಿಗಾಗಿ ಪರದಾಡುತ್ತಿರುವುದು ಕಾಣಬಹುದಾಗಿದೆ. ಅದಾಗಲೇ ಕೆಲವೊಂದು ಬಕೆಟ್ ಗಳನ್ನು ಹಗ್ಗದ ಮೂಲಕ ಇಳಿಸಿ ನೀರು ಸೇದುತ್ತಿರುವುದನ್ನು ದೃಶ್ಯದಲ್ಲಿ ಕಾಣಬಹುದಾಗಿದೆ.
ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಲಾದ ಪ್ರಕಾರ, ಈ ದೃಶ್ಯವು ಮಹಾರಾಷ್ಟ್ರದ ಮೆಟ್ಘರ್ ಗ್ರಾಮದ ತ್ರಿಂಬಕೇಶ್ವರ್ ನಲ್ಲಿ ಕಂಡು ಬಂದಿದೆ ಎನ್ನಲಾಗಿದೆ. ಮಹಾರಾಷ್ಟ್ರದ ಹಲವೆಡೆ ನೀರಿಗಾಗಿ ಇಂತಹ ಹಾಹಾಕಾರ ಕಾಣಬಹುದಾಗಿದೆ ಎಂದು ಟ್ವಿಟ್ಟರ್ ಬಳಕೆದಾರರು ತಿಳಿಸಿದ್ದಾರೆ.
“ನೀರು ತುಂಬಿಸಲು ಮಹಿಳೆಯರು ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ. ಇದೆಲ್ಲವೂ ನಡೆಯುತ್ತಿರುವುದು 2022ರಲ್ಲಿ… ಮಹಾರಾಷ್ಟ್ರ ಸರಕಾರವು ಕೇಂದ್ರದ ವಿರುದ್ಧ ಹಿಂದೂ-ಮುಸ್ಲಿಂ, ಇಡಿ-ಸಿಬಿಐ ನಂತಹ ದೊಡ್ಡ ಸಮಸ್ಯೆಗಳ ಮಧ್ಯೆ ಮೂಲಭೂತ ಅವಶ್ಯಕತೆಗಳು ಕಳೆದು ಹೋಗಿವೆ” ಎಂದು ಪತ್ರಕರ್ತ ಸೋಹಿತ್ ಮಿಶ್ರಾ ವಿಡಿಯೋ ಸಹಿತ ಟ್ವೀಟ್ ಮಾಡಿದ್ದಾರೆ.