ಉಪ್ಪಿನಂಗಡಿ: ಗುಂಡ್ಯದಲ್ಲಿ ನಡೆದ ಅನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳಿಗೆ ಶಾಸಕ ಸಂಜೀವ ಮಠಂದೂರ್ ನೆರವಾಗಿಲ್ಲ ಎಂದು ಆರೋಪಿಸಿ ಸಂಘಪರಿವಾರದ ಕಾರ್ಯಕರ್ತರು ಅವರು ಪ್ರಯಾಣಿಸುತ್ತಿದ್ದ ಬಸ್ಸಿಗೆ ಮುತ್ತಿಗೆ ಹಾಕಿದ ಘಟನೆ ಮಂಗಳವಾರ ತಡರಾತ್ರಿ ಉಪ್ಪಿನಂಗಡಿಯಲ್ಲಿ ನಡೆದಿದೆ.
ಗುಂಡ್ಯದಲ್ಲಿ ವಿಹರಿಸುತ್ತಿದ್ದ ಭಿನ್ನಮತೀಯ ಜೋಡಿಯೊಂದನ್ನು ಸಂಘಪರಿವಾರದ ಕಾರ್ಯಕರ್ತರು ಹಿಡಿದು ಪೊಲೀಸರಿಗೊಪ್ಪಿಸಿದ್ದರು.
ಈ ಮಧ್ಯೆ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತ ಯುವಕ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇದರನ್ವಯ ಪೊಲೀಸರು ಪ್ರಕರಣ ದಾಖಲಿಸಿ ಬಾಲಚಂದ್ರ ಮತ್ತು ರಂಜಿತ್ ಎಂಬವರನ್ನು ಬಂಧಿಸಿದ್ದರು.
ಜೋಡಿಗಳಿಗೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ಬಂಧನದಿಂದ ಆಕ್ರೋಶಗೊಂಡ ಸಂಘಪರಿವಾರದ ಕಾರ್ಯಕರ್ತರು, ಹಿಂದುತ್ವಕ್ಕಾಗಿ ಕೆಲಸ ಮಾಡುವ ಕಾರ್ಯಕರ್ತರಿಗೆ ಸ್ಥಳೀಯ ಶಾಸಕ ಸಂಜೀವ ಮಠಂದೂರ್ ಬೆಂಬಲ ನೀಡಿಲ್ಲವೆಂದು ಆರೋಪಿಸಿ ಅವರು ಪ್ರಯಾಣಿಸುತ್ತಿದ್ದ ಬಸ್ಸಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಶಾಸಕರಿಗೆ ದಿಕ್ಕಾರ ಕೂಗಿದ್ದರು.