ಹೊಸದಿಲ್ಲಿ: ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವ ಪಾಕಿಸ್ತಾನದ 4 ಚಾನೆಲ್ಗಳು ಹಾಗೂ ಭಾರತದ 18 ಯೂಟ್ಯೂಬ್ ಸುದ್ದಿವಾಹಿನಿಗಳನ್ನು ಬ್ಲಾಕ್ ಮಾಡುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೂಚಿಸಿದೆ.
ಕಳೆದ ವರ್ಷದ ಫೆಬ್ರವರಿಯಲ್ಲಿ ಐಟಿ ನಿಯಮಗಳು-2021 ಜಾರಿಯಾದ ಬಳಿಕ, ಇದೇ ಮೊದಲ ಬಾರಿ ಭಾರತೀಯ ಯೂಟ್ಯೂಬ್ ನ್ಯೂಸ್ ಪಬ್ಲಿಷರ್ಗಳ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.
22 ಯೂಟ್ಯೂಬ್ ಚಾನೆಲ್ಗಳು, 3 ಟ್ವಿಟರ್ ಖಾತೆಗಳು, ಒಂದು ಫೇಸ್ಬುಕ್ ಖಾತೆ ಮತ್ತು ಒಂದು ನ್ಯೂಸ್ ವೆಬ್ಸೈಟ್ ಬ್ಲಾಕ್ ಮಾಡುವಂತೆ ಸಚಿವಾಲಯ ಆದೇಶ ಹೊರಡಿಸಿದೆ. ಈ ಮೂಲಕ, 2021ರ ಡಿಸೆಂಬರ್ನಿಂದ ಈವರೆಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಭದ್ರತೆ, ಸಾರ್ವಭೌಮತೆ ಮತ್ತು ಸಮಗ್ರತೆ, ಕಾನೂನು ಸುವ್ಯವಸ್ಥೆ ಇತ್ಯಾದಿಗಳ ಹೆಸರಲ್ಲಿ ಒಟ್ಟು 78 ಯೂಟ್ಯೂಬ್ ಸುದ್ದಿವಾಹಿನಿಗಳು ಹಾಗೂ ಹಲವು ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ನಿಷೇಧಿಸಿದೆ.