ರಾಯಚೂರು: ಹೋಳಿ ಆಚರಣೆಯ ಪ್ರಯುಕ್ತ ಸಂಘಪರಿವಾರದ ಕಾರ್ಯಕರ್ತರು ಮಸೀದಿಯ ಸಮೀಪ ಧ್ವನಿವರ್ಧಕ ಬಳಸಿಕೊಂಡು ಸಂಗೀತ ಹಾಕಿ ನೃತ್ಯ ಮಾಡಿದ ನಂತರ ಹಿಂದೂ ಮುಸ್ಲಿಮರ ನಡುವೆ ಉಂಟಾಗಿದ್ದು, ಇತ್ತಂಡಗಳು ಪರಸ್ಪರ ಕಲ್ಲು ತೂರಾಟ ನಡೆಸಿದ ಘಟನೆ ರಾಯಚೂರಿನ ಯರಡೋಣಾ ಗ್ರಾಮದಲ್ಲಿ ನಡೆದಿದೆ.
ಮಸೀದಿಗಳ ಸಮೀಪದಲ್ಲಿ ಡಿಜೆ ಹಾಡುಗಳನ್ನು ಧ್ವನಿವರ್ಧಕದಲ್ಲಿ ಹಾಕಿದ ವಿಚಾರದಲ್ಲಿ ಇತ್ತಂಡ ನಡುವೆ ಘರ್ಷಣೆ ಏರ್ಪಟ್ಟಿದೆ ಎಂದು ಹೇಳಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಯರಡೋಣಾ ಗ್ರಾಮದಲ್ಲಿನ ಜಾಮೀಯಾ ಮಸೀದಿ ಸಮೀಪ ಇತ್ತಂಡಗಳು ಪರಸ್ಪರ ಕಲ್ಲು ತೂರಾಟ ನಡೆಸಿದ್ದು, ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಘಟನೆಯ ಸಂದರ್ಭದಲ್ಲಿ ಮಸೀದಿಯ ಮೇಲೆಯೂ ದಾಳಿ ನಡೆದಿದ್ದು, ಘರ್ಷಣೆಯಲ್ಲಿ ಕನಿಷ್ಠ ಇಬ್ಬರು ಮುಸ್ಲಿಮರು ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸ್ಥಳೀಯ ನಿವಾಸಿಗಳಿಂದ ಯಾವುದೇ ದಾಖಲಾಗಿಲ್ಲವಾದರೂ ರಾಯಚೂರು ಪೊಲೀಸರು ಘರ್ಷಣೆಯ ನಂತರ ಕನಿಷ್ಠ 40 ಅನಾಮಧೇಯ ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಈ ಮಧ್ಯೆ ಮಸೀದಿ ಡಿಜೆ ಹಾಕಿ ಹೋಳಿ ಆಚರಣೆಗೆ ಯಾವುದೇ ಅನುಮತಿ ಪಡೆದುಕೊಂಡಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 107, 151 ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.