ಕೊಲಂಬೋ: ತೀವ್ರ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿರುವ ಶ್ರೀಲಂಕಾದಲ್ಲಿ ಪ್ರಧಾನಿಯನ್ನು ಹೊರತುಪಡಿಸಿ ಸಂಪೂರ್ಣ ಸಚಿವ ಸಂಪುಟ ರಾಜೀನಾಮೆ ನೀಡಿದೆ. ಪ್ರಧಾನಿ ಮಹಿಂದಾ ರಾಜಪಕ್ಸೆ ಅವರ ರಾಜೀನಾಮೆ ಬಗ್ಗೆ ಎಲ್ಲಾ ವದಂತಿಗಳನ್ನು ಶ್ರೀಲಂಕಾ ಪ್ರಧಾನ ಮಂತ್ರಿ ಕಚೇರಿಯು ನಿರಾಕರಿಸಿದೆ.
ದೇಶದಲ್ಲಿ ತಲೆದೋರಿರುವ ಆರ್ಥಿಕ ಬಿಕ್ಕಟ್ಟಿನ ನಡುವೆ ಪ್ರಧಾನಿ ಮಹಿಂದಾ ರಾಜಪಕ್ಸೆ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಈ ಭೇಟಿಯು ಪ್ರಧಾನಿಯವರ ರಾಜೀನಾಮೆ ಬಗ್ಗೆ ಊಹಾಪೋಹಗಳನ್ನು ಹೆಚ್ಚಿಸಿದ್ದು, ಸಭೆಯಲ್ಲಿ ಹಲವಾರು ಪ್ರಮುಖ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಸಭೆಯಲ್ಲಿ ಅಧ್ಯಕ್ಷ ಗೋಟಾಬಯ ಮತ್ತು ಪ್ರಧಾನಿ ಮಹಿಂದಾ ರಾಜಪಕ್ಸೆ ಯವರನ್ನು ಹೊರತುಪಡಿಸಿ ದೇಶದ ಸಂಪೂರ್ಣ ಸಚಿವ ಸಂಪುಟ ತಮ್ಮ ಸ್ಥಾನಗಳಿಗೆ ಸಾಮೂಹಿಕ ರಾಜೀನಾಮೆ ನೀಡಿದೆ ಎಂದು ಶ್ರೀಲಂಕಾ ಶಿಕ್ಷಣ ಸಚಿವ ದಿನೇಶ್ ಗುಣವರ್ದನಾ ತಿಳಿಸಿದ್ದಾರೆ.
ಏರುತ್ತಿರುವ ಹಣದುಬ್ಬರ ಮತ್ತು ದುರ್ಬಲ ಕರೆನ್ಸಿ ಶ್ರೀಲಂಕಾದಲ್ಲಿ ಮೂಲ ಸರಕುಗಳ ಬೆಲೆಗಳನ್ನು ಗಗನಕ್ಕೇರಿಸಿದೆ. ತೀವ್ರ ಆರ್ಥಿಕ ಕುಸಿತದ ಕಾರಣದಿಂದ ದ್ವೀಪ ರಾಷ್ಟ್ರದ ಜನರು ಇಂಧನ, ಆಹಾರ ಮತ್ತು ಔಷಧಿಗಳನ್ನು ಖರೀದಿಸಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ.