ನವದೆಹಲಿ: ಐಪಿಎಸ್ ವೃತ್ತಿಗೆ ಸ್ವಯಂ ನಿವೃತ್ತಿ ಘೋಷಿಸಿದ್ದ ಭಾಸ್ಕರ್ ರಾವ್ ನಾಳೆ ಎಎಪಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ರೈಲ್ವೆ ಪೊಲೀಸ್ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ)ರಾಗಿ ಸೇವೆ ಸಲ್ಲಿಸುತ್ತಿದ್ದ ಭಾಸ್ಕರ್ ರಾವ್ ಕಳೆದ ಶುಕ್ರವಾರ ಐಪಿಎಸ್ ಹುದ್ದೆಗೆ ಸ್ವಯಂ ನಿವೃತ್ತಿ ಘೋಷಿಸಿದ್ದರು.
ರಾಜಧಾನಿ ದೆಹಲಿಯ ದೀನ್ ದಯಾಳ್ ಉಪಾದ್ಯಾಯ ಮಾರ್ಗದಲ್ಲಿರುವ ಆಪ್ ಕಚೇರಿಯಲ್ಲಿ ನಾಳೆ ಮಧ್ಯಾಹ್ನ ಭಾಸ್ಕರ್ ರಾವ್ ಪಕ್ಷ ಸೇರಲಿದ್ದಾರೆ. ಈ ಸಂದರ್ಭ ಪಕ್ಷದ ಹಿರಿಯ ಮುಖಂಡ ಮನೀಷ್ ಸಿಸೋಡಿಯಾ ಮತ್ತಿತರರು ಹಾಜರಿರಲಿದ್ದಾರೆ ಎಂದು ವರದಿಯಾಗಿದೆ.
2019-20ರ ಅವಧಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಭಾಸ್ಕರ್, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ, ಆಂತರಿಕ ಭದ್ರತಾ ವಿಭಾಗದಲ್ಲಿಯೂ ಕೆಲಸ ನಿರ್ವಹಿಸಿದ್ದರು.