ಬಟ್ಲರ್‌ ಶತಕದ ಮಿಂಚು | ರಾಜಸ್ಥಾನ ರಾಯಲ್ಸ್‌ ತಂಡಕ್ಕೆ ಸತತ 2ನೇ ಗೆಲುವು

Prasthutha|

ಬಟ್ಲರ್‌ ಶತಕದ ಬಲದೊಂದಿಗೆ ಮಿಂಚಿದ ರಾಜಸ್ತಾನ ರಾಯಲ್ಸ್‌, ಶನಿವಾರದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ 23 ರನ್‌ಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದೆ.

- Advertisement -

ಟಾಸ್‌ ಸೋತು ಬ್ಯಾಟ್‌ ಮಾಡಿದ ರಾಯಲ್ಸ್‌, ಆರಂಭಿಕ ಜಾಸ್‌ ಬಟ್ಲರ್‌ ಆಕರ್ಷಕ ಶತಕ ನೆರವಿನೊಂದಿಗೆ 8 ವಿಕೆಟ್‌ ನಷ್ಟದಲ್ಲಿ 193 ರನ್‌ಗಳಿಸಿತ್ತು. ಕಠಿಣ ಮೊತ್ತವನ್ನುಬೆನ್ನಟ್ಟುವ ವೇಳೆ 8 ವಿಕೆಟ್‌ ನಷ್ಟದಲ್ಲಿ ಮುಂಬೈ ಇಂಡಿಯನ್ಸ್‌ 170 ರನ್‌ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಪಂದ್ಯದಲ್ಲೂ ರೋಹಿತ್‌ ಪಡೆ ಸೋಲಿಗೆ ಶರಣಾಗಿದೆ.

15ನೇ ಆವೃತ್ತಿಯ ಮೊದಲ ಶತಕ

- Advertisement -

ಈ ಬಾರಿಯ ಐಪಿಎಲ್‌ನ ಮೊದಲ ಶತಕ ಜಾಸ್‌ ಬಟ್ಲರ್‌ ಬ್ಯಾಟ್‌ನಿಂದ ದಾಖಲಾಗಿದೆ. ರಾಯಲ್ಸ್‌ ಪರ ಆರಂಭಿಕನಾಗಿ ಕಣಕ್ಕಿಳಿದ ಬಟ್ಲರ್‌, 68 ಎಸೆತಗಳನ್ನು ಎದುರಿಸಿ, 5 ಸಿಕ್ಸರ್‌ ಮತ್ತು 11 ಬೌಂಡರಿಗಳ ನೆರವಿನಿಂದ ಆಕರ್ಷಕ ಶತಕ ದಾಖಲಿಸಿದರು. ಕ್ಯಾಪ್ಟನ್‌ ಕಮ್‌ ಕೀಪರ್‌ ಸಂಜು ಸ್ಯಾಮ್ಸನ್‌ 30, ಶಿಮ್ರಾನ್ ಹೇಟ್ಮೇರ್‌ 35 ರನ್‌ಗಳಿಸಿ ನಿರ್ಗಮಿಸಿದರು. ಮುಂಬೈ ಪರ ಜಸ್ಪ್ರೀತ್‌ ಬುಮ್ರಾ ಮತ್ತು ಟೈಮಲ್‌ ಮಿಲ್ಸ್‌ ತಲಾ 3 ವಿಕೆಟ್‌ ಪಡೆದರು.

194 ರನ್‌ಗಳ ಗುರಿಯೊಂದಿಗೆ ಇನ್ನಿಂಗ್ಸ್‌ ಆರಂಭಿಸಿದ ಮುಂಬೈ ಆರಂಭ ಉತ್ತಮವಾಗಿರಲಿಲ್ಲ. ನಾಯಕ ರೋಹಿತ್‌ ಶರ್ಮಾ 10 ರನ್‌ ಗಳಿಸುವಷ್ಟರಲ್ಲೇ ನಿರ್ಗಮಿಸಿದರು. ತಾಳ್ಮೆಯ ಆಟವಾಡಿದ ಇಶನ್‌ ಕಿಶಾನ್‌, 43 ಎಸೆತಗಳಿದ ಅರ್ಧಶತಕ ಗಳಿಸಿದರೆ, ಯುವ ಆಟಗಾರ ತಿಲಕ್‌ ವರ್ಮಾ 5 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 33 ಎಸೆತಗಳಲ್ಲಿ 61 ರನ್‌ ಸಿಡಿಸಿ ಮಿಂಚಿದರು. ಕೊನೆಯಲ್ಲಿ ಪೊಲಾರ್ಡ್‌ ಪಂದ್ಯ ಗೆಲ್ಲಿಸಿಕೊಡಬಹುದೆಂಬ ಅಭಿಮಾನಿಗಳ ನಿರೀಕ್ಷೆಯೂ ಹುಸಿಯಾಯಿತು.‌ 24 ಎಸೆತಗಳಲ್ಲಿ 22 ರನ್‌ಗಳಿಸಿದ ಪೊಲಾರ್ಡ್‌ ಇನ್ನಿಂಗ್ಸ್‌ನ ಅಂತಿಮ ಎಸೆತದಲ್ಲಿ ನವದೀಪ್‌ ಸೈನಿಗೆ ವಿಕೆಟ್‌ ಒಪ್ಪಿಸಿದರು.

ಸತತ 2 ಗೆಲುವಿನೊಂದಿಗೆ ಸಂಜು ಸ್ಯಾಮ್ಸನ್‌ ನೇತೃತ್ವದ ರಾಜಸ್ಥಾನ್‌ ರಾಯಲ್ಸ್‌ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. 3 ಪಂದ್ಯಗಳಲ್ಲಿ 2 ಗೆಲುವು ಸಾಧಿಸಿರುವ ಕೋಲ್ಕತ್ತಾ 2ನೇ ಸ್ಥಾನದಲ್ಲಿದೆ. ಮತ್ತೊಂದೆಡೆ 2 ಪಂದ್ಯಗಳಲ್ಲೂ ಸೋಲನುಭವಿಸಿರುವ ಮುಂಬೈ 9ನೇ ಸ್ಥಾನಕ್ಕೆ ಕುಸಿದಿದೆ.



Join Whatsapp