ಬೆಂಗಳೂರು: ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿಂದು ಸರ್ವಪಕ್ಷ ಮುಖಂಡರ ಸಭೆ ನಡೆಯಿತು.
ಮೀಸಲಾತಿ ವಿಷಯದಲ್ಲಿ ಸ್ಪಷ್ಟತೆ ಪಡೆಯುವ ಉದ್ದೇಶದಿಂದ ಆಯೋಗವೊಂದನ್ನು ರಚಿಸಲು ಹಾಗೂ ಅಡ್ವೋಕೆಟ್ ಜನರಲ್ ಅವರಿಂದ ಕಾನೂನಿನ ತೊಡಕುಗಳ ಕುರಿತು ವರದಿ ಪಡೆದ ನಂತರ ಸೂಕ್ತ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಸಭೆಯಲ್ಲಿ ಸಚಿವರಾದ ಜೆ.ಸಿ. ಮಾಧುಸ್ವಾಮಿ, ಕೆ.ಎಸ್. ಈಶ್ವರಪ್ಪ, ಗೋವಿಂದ ಕಾರಜೋಳ, ಬೈರತಿ ಬಸವರಾಜ್, ಎಂ.ಟಿ.ಬಿ. ನಾಗರಾಜ್, ಕೋಟಾ ಶ್ರೀನಿವಾಸ ಪೂಜಾರಿ, ವಿಧಾನಮಂಡಲದ ಉಭಯ ಸದನಗಳ ವಿರೋಧ ಪಕ್ಷಗಳ ನಾಯಕರಾದ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್, ಜೆಡಿಎಸ್ ಮುಖಂಡ ಬಂಡೆಪ್ಪ ಕಾಶೆಂಪುರ್, ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಸೇರಿದಂತೆ ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗಗಗಳಿಗೆ ರಾಜಕೀಯ ಮೀಸಲಾತಿ ಕಲ್ಪಿಸುವ ಸಂಬಂಧ ಸಮಗ್ರವಾಗಿ ಅಧ್ಯಯನ ನಡೆಸಿ, ವರದಿ ನೀಡಲು ವಿಶೇಷ ಆಯೋಗ ರಚಿಸಲಾಗುವುದು ಎಂದರು.
ಕಾಲಮಿತಿಯಲ್ಲಿ ವರದಿ ನೀಡುವಂತೆ ಆಯೋಗಕ್ಕೆ ಸೂಚಿಸಿದ್ದು, ವರದಿ ಬಂದ ನಂತರ ಅದರ ಸಾಧಕ-ಬಾಧಕಗಳನ್ನು ಪರಿಶೀಲಿಸಿ, ಸುಪ್ರೀಂಕೋರ್ಟ್ನಲ್ಲಿ ಪ್ರಮಾಣಪತ್ರ ಸಲ್ಲಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ರಾಜಕೀಯವಾಗಿ ಹಿಂದುಳಿದಿರುವಿಕೆಯನ್ನು ಗುರುತಿಸಿ, ಮೀಸಲಾತಿ ಸೌಲಭ್ಯ ಕಲ್ಪಿಸುವ ಕುರಿತು ಚರ್ಚಿಸಲಾಗಿದೆ. ಸುಪ್ರೀಂ ಕೋರ್ಟ್ ನಲ್ಲಿ ಇಂದಿರಾ ಸಹಾನಿ ಪ್ರಕರಣದ ತೀರ್ಪಿನಲ್ಲಿ ಶೇಕಡ 50ರಷ್ಟು ಮೀಸಲಾತಿ ಪ್ರಮಾಣ ಹೆಚ್ಚಾಗಬಾರದು ಎಂಬ ನಿಯಮವಿದೆ. ಇದರ ಪರಿಮಿತಿಯಲ್ಲಿ ಮೀಸಲಾತಿ ಇಲ್ಲದಿದ್ದರೆ, ಅದನ್ನು ರದ್ದುಗೊಳಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಮಹಾರಾಷ್ಟ್ರದಲ್ಲಿ ಚುನಾವಣೆಯನ್ನೇ ರದ್ದು ಮಾಡಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಲು ಆಯೋಗವೊಂದನ್ನು ರಚಿಸಿ ವರದಿ ಪಡೆದು, ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಇಂತಹ ಮೀಸಲಾತಿ ನಿಗದಿ ಮಾಡುವ ಅಧಿಕಾರವನ್ನು ಇತ್ತೀಚೆಗೆ ಸಂಸತ್, ರಾಜ್ಯಗಳಿಗೆ ನೀಡಿದೆ. ಈ ಕುರಿತಂತೆ ಸೂಕ್ತ ವರದಿ ನೀಡುವಂತೆ ಅಡ್ವೊಕೇಟ್ ಜನರಲ್ ಅವರಿಗೆ ಸೂಚಿಸಲಾಗಿದೆ. ಬಳಿಕ ಅಗತ್ಯ ಕಂಡುಬಂದಲ್ಲಿ ಸುಪ್ರೀಂ ಕೋರ್ಟ್ ಮುಂದೆ ಪ್ರಮಾಣಪತ್ರ ಸಲ್ಲಿಸಿ ಚುನಾವಣೆಗೆ ತೆರಳುವ ಕುರಿತು ನಿರ್ಧರಿಸಲಾಗುವುದು. ಈಗಿನ ಪರಿಸ್ಥಿತಿಯಲ್ಲಿ ಹಿಂದುಳಿದ ಸಮುದಾಯ ಹಾಗೂ ಮೀಸಲಾತಿಯನ್ನು ಬಿಟ್ಟು ಚುನಾವಣೆ ನಡೆಸುವುದು ಸೂಕ್ತವಲ್ಲ. ಹೀಗಾಗಿ ಚುನಾವಣೆಗೆ ಸ್ವಲ್ಪ ಅಡಚಣೆಯಾಗಬಹುದು ಎಂದು ತಿಳಿಸಿದರು.
ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸದೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸುವುದಕ್ಕೆ ಸರ್ಕಾರ ಬಯಸಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.