ಮುಸ್ಲಿಮ್ ವ್ಯಾಪಾರಸ್ಥರ ಮೇಲೆ ಹಲ್ಲೆ: ಬಜರಂಗದಳ ಗೂಂಡಾಗಳ ವಿರುದ್ಧ ಕಠಿಣ ಕ್ರಮಕ್ಕೆ ಪಾಪ್ಯುಲರ್ ಫ್ರಂಟ್ ಆಗ್ರಹ

Prasthutha|

ಶಿವಮೊಗ್ಗ: ಭದ್ರಾವತಿಯಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ ಹೊಟೇಲ್ ಮತ್ತು ಕೋಳಿ ಅಂಗಡಿಗೆ ನುಗ್ಗಿ ಮುಸ್ಲಿಮರ ಮೇಲೆ ಹಲ್ಲೆ ನಡೆಸಲಾಗಿದ್ದು, ಈ ದುಷ್ಕೃತ್ಯ ನಡೆಸಿದ ಬಜರಂಗ ದಳದ ಗೂಂಡಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಶಿವಮೊಗ್ಗ ಜಿಲ್ಲಾಧ್ಯಕ್ಷ ಸೈಯ್ಯದ್ ರಿಝ್ವಾನ್ ಆಗ್ರಹಿಸಿದ್ದಾರೆ.

- Advertisement -

ಹಿಜಾಬ್, ಮುಸ್ಲಿಮ್ ವ್ಯಾಪಾರಿಗಳಿಗೆ ನಿರ್ಬಂಧದ ನಂತರ ಈಗ ಸಂಘಪರಿವಾರದ ಕಿಡಿಗೇಡಿಗಳು ಹಲಾಲ್ ವಿಚಾರವನ್ನು ವಿವಾದಕ್ಕೆ ಗುರಿಪಡಿಸುತ್ತಿವೆ. ಹಲಾಲ್ ವಿಚಾರವನ್ನು ಪ್ರಸ್ತಾಪಿಸಿ ಗದ್ದಲೆವೆಬ್ಬಿಸಿದ ದುಷ್ಕರ್ಮಿಗಳು ಕೋಳಿ ಅಂಗಡಿ ನಡೆಸುತ್ತಿದ್ದ ವೃದ್ಧರು ಹಾಗೂ ಕೆಲಸಕ್ಕಿದ್ದ ವ್ಯಕ್ತಿಯ ಮೇಲೆ ಮತ್ತು ಹೋಟೇಲ್ ನುಗ್ಗಿ ಗ್ರಾಹಕರ ಮೇಲೆಯೂ ದಾಳಿ ನಡೆಸಿದ್ದಾರೆ. ಸಂಘಪರಿವಾರದ ಶಕ್ತಿಗಳು ಒಂದಿಲ್ಲೊಂದು ವಿಚಾರದ ಬಗ್ಗೆ ವಿವಾದ ಸೃಷ್ಟಿಸಿ ಶಾಂತಿ ಕದಡುವ ಪ್ರಯತ್ನ ನಡೆಸುತ್ತಿವೆ. ಹಿಜಾಬ್ ವಿಚಾರದಲ್ಲಿ ವಿದ್ಯಾರ್ಥಿಗಳ ನಡುವೆ ಕಂದಕವನ್ನು ಸೃಷ್ಟಿಸಲಾಯಿತು. ನಂತರ ಜಾತ್ರಾ ಮಹೋತ್ಸವಗಳಲ್ಲಿ ಬಡ ಮುಸ್ಲಿಮ್ ವ್ಯಾಪಾರಿಗಳಿಗೆ ನಿರ್ಬಂಧ ಹೇರುವ ಪ್ರಯತ್ನ ನಡೆಸಲಾಯಿತು. ಇದೀಗ ಧರ್ಮ ಸಮ್ಮತವಾಗಿರುವ ಆಹಾರದ ಬಗ್ಗೆ ಅವರು ತಕರಾರು ಎತ್ತುತ್ತಿದ್ದಾರೆ. ಸಂಘಪರಿವಾರದ ಗೂಂಡಾಗಳ ಇಂತಹ ನಡೆಗಳು ಜಿಲ್ಲೆಯನ್ನು ಮತ್ತಷ್ಟು ಪ್ರಕ್ಷ್ಯುಬ್ಧತೆಗೆ ತಳ್ಳಲಿದೆ.

ಜಿಲ್ಲೆಯ ಕೋಮು ಸಾಮರಸ್ಯ ಕದಡಲು ಪ್ರಯತ್ನಿಸುವ ಇಂತಹ ಸಮಾಜಘಾತುಕ ಶಕ್ತಿಗಳ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು. ಮುಸ್ಲಿಮ್ ವ್ಯಾಪಾರಿಗಳಿಗೆ ರಕ್ಷಣೆಯನ್ನು ನೀಡಿ ಅವರ ಜೀವನೋಪಾಯವನ್ನು ಖಾತರಿಪಡಿಸಬೇಕು. ಹೊಟೇಲ್ ಮತ್ತು ಅಂಗಡಿ ನುಗ್ಗಿ ದಾಂಧಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಕಠಿಣ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ಸೈಯ್ಯದ್ ರಿಝ್ವಾನ್ ಒತ್ತಾಯಿಸಿದ್ದಾರೆ.



Join Whatsapp