ಆಟೋಗೆ ಲಾರಿ ಡಿಕ್ಕಿ: ಅಂತ್ಯಸಂಸ್ಕಾರಕ್ಕೆ ಹೊರಟಿದ್ದ ಮೂವರು ಸಾವು

Prasthutha|

ಚಿತ್ರದುರ್ಗ: ಲಾರಿ ಮತ್ತು ಆಟೋ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟು ಆರು ಮಂದಿ  ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ಕಾತ್ರಾಳು ಕೆರೆಯ ಬಳಿ ನಡೆದಿದೆ. ಜಗಳೂರು ತಾಲೂಕಿನ ಕೆಳಗೋಟೆ ಗ್ರಾಮದ ಹಾಲಪ್ಪ (70), ರುದ್ರಮ್ಮ (58) ಹಾಗೂ ಸಣ್ಣ ಬಸವರಾಜಪ್ಪ (45) ಮೃತಪಟ್ಟವರು.

- Advertisement -

ಗಾಯಗೊಂಡ ಕಲ್ಲೇಶಪ್ಪ, ಚಂದ್ರಪ್ಪ, ಪಾರ್ವತಮ್ಮ, ರುದ್ರೇಶಪ್ಪ, ಸಿದ್ದೇಶ್ ಸೇರಿ ಆರು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

ಮಾರಘಟ್ಟದಲ್ಲಿ ಸಂಬಂಧಿಕರೊಬ್ಬರು ಮೃತಪಟ್ಟಿದ್ದರಿಂದ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಕೆಳಗೋಟೆ ಗ್ರಾಮದ ಒಂಬತ್ತು ಮಂದಿ ಆಟೋದಲ್ಲಿ ಹೊರಟಿದ್ದರು. ಈ ವೇಳೆ ದಾವಣಗೆರೆಯಿಂದ ಚಿತ್ರದುರ್ಗದ ಕಡೆ ಬರುತ್ತಿದ್ದ ಐಷರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಆಟೋಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

- Advertisement -

ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಎಲ್ಲರನ್ನೂ ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಇದರಲ್ಲಿ ಮೂವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

ಅಪಘಾತದ ವಿಷಯ ತಿಳಿದ ಕೂಡಲೇ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.



Join Whatsapp