ನವದೆಹಲಿ: ಇಂಧನ ಬೆಲೆ ಏರಿಕೆ ವಿರೋಧಿಸಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸಂಸದರು ಇಂದು ವಿಜಯ್ ಚೌಕ್ ನಲ್ಲಿ ಪ್ರತಿಭಟನೆ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, “ಕಳೆದ 10 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 9 ಬಾರಿ ಏರಿಕೆಯಾಗಿದೆ, ಏರುತ್ತಿರುವ ಬೆಲೆಗಳನ್ನು ನಿಯಂತ್ರಣಕ್ಕೆ ತರಬೇಕು ಎಂದು ನಾವು ಒತ್ತಾಯಿಸುತ್ತೇವೆ. ಈ ವಿಷಯವಾಗಿ ಕಾಂಗ್ರೆಸ್ ಪಕ್ಷವು ಇಂದು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ”ಎಂದು ಹೇಳಿದರು.
ಹಣದುಬ್ಬರ ಮತ್ತು ಇಂಧನ ಬೆಲೆ ಏರಿಕೆ ವಿಷಯಗಳ ಕುರಿತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು, ಬೆಲೆ ಏರಿಕೆಯ ವಿರುದ್ಧ ರಾಷ್ಟ್ರವ್ಯಾಪಿ ಕಾರ್ಯಕ್ರಮ ಬೆಲೆಯೇರಿಕೆ ಮುಕ್ತ ಭಾರತ ಅಭಿಯಾನ’ವನ್ನು ಪ್ರಾರಂಭಿಸಲು ಕಾಂಗ್ರೆಸ್ ನಿರ್ಧರಿಸಿದ್ದು, ಅದರ ಅಡಿಯಲ್ಲಿ ಮಾರ್ಚ್ 31 ರಿಂದ ಏಪ್ರಿಲ್ 7 ರವರೆಗೆ ದೇಶಾದ್ಯಂತ ಜಾಥಾ ಗಳನ್ನು ಮತ್ತು ಮೆರವಣಿಗೆಗಳನ್ನು ಆಯೋಜಿಸಲಾಗುತ್ತಿದೆ.