ರಾಜ್ಯ ಸರ್ಕಾರದ ದುರಾಡಳಿತ ವಿರೋಧಿಸಿ SDPI ನಿಂದ ಎಪ್ರಿಲ್ 1ರಂದು ರಾಜ್ಯಾದ್ಯಂತ ಪ್ರತಿಭಟನೆ: ಅಬ್ದುಲ್ ಮಜೀದ್

Prasthutha|

ಬೆಂಗಳೂರು: ರಾಜ್ಯ ಸರ್ಕಾರದ ದುರಾಡಳಿತ ಮತ್ತು ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದನ್ನು ವಿರೋಧಿಸಿ ಎಪ್ರಿಲ್ 1ರಂದು ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ತಿಳಿಸಿದ್ದಾರೆ.

- Advertisement -

ಪಕ್ಷದ ರಾಜ್ಯ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು, ಇದಕ್ಕೆ ರಾಜ್ಯ ಬಿಜೆಪಿ ಸರ್ಕಾರವೇ ಕುಮ್ಮಕ್ಕು ನೀಡುತ್ತಿದೆ. ರಾಜ್ಯದ ಆರೂವರೆ ಕೋಟಿ ಜನರು ಎಚ್ಚೆತ್ತುಕೊಳ್ಳಬೇಕು. ರಾಜ್ಯ ಮತ್ತಷ್ಟು ಅರಾಜಕತೆಗೆ ಹೋಗಲು ಬಿಡಬಾರದು ಎಂದು ಮನವಿ ಮಾಡಿದರು.

ರಾಜ್ಯದ ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ. ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವವಾಡುತ್ತಿವೆ. ಯಾವುದೇ ಕೆಲಸವಾಗಬೇಕಾದರೂ ಶೇಕಡಾ 40ರಷ್ಟು ಕಮಿಷನ್ ನೀಡಲೇಬೇಕಾಗಿದೆ. ಸ್ವತಃ ಬಿಜೆಪಿ ಮುಖಂಡರೊಬ್ಬರೇ ಈ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಗುತ್ತಿಗೆದಾರರ ಸಂಘವೇ ಶೇಕಡಾ 40ರಷ್ಟು ಕಮಿಷನ್ ಬಗ್ಗೆ ಮೋದಿಗೆ ಪತ್ರ ಬರೆದಿದೆ. ಬೆಲೆ ಏರಿಕೆ, ಭ್ರಷ್ಟಾಚಾರ, ದುರಾಡಳಿತಗಳಿಂದ ಬೇಸತ್ತ ಜನರು ದಂಗೆ ಏಳಬಹುದು ಎಂಬ ಕಾರಣಕ್ಕೆ ಅವರ ಮನಸ್ಸನ್ನು ಬೇರೆಡೆ ತಿರುಗಿಸಲು ಕೇಶವಕೃಪದಿಂದ ಬಂದ ಅಜೆಂಡಾಗಳಾದ ಹಲಾಲ್, ಮುಸ್ಲಿಮರಿಗೆ ವ್ಯಾಪಾರ ನಿಷೇಧ, ಹಿಜಾಬ್ , ಟಿಪ್ಪು ಸುಲ್ತಾನ್ ಮುಂತಾದ ವಿಷಯಗಳನ್ನು ಬಿಜೆಪಿ ಮತ್ತು ಸಂಘಪರಿವಾರ ಮುನ್ನಲೆಗೆ ತಂದಿದೆ ಎಂದು ಅವರು ಆರೋಪಿಸಿದರು.

- Advertisement -

ರಾಜ್ಯದಲ್ಲಿ ತಲೆತಲಾಂತರಗಳಿಂದ ಎಲ್ಲಾ ಸಮುದಾಯಗಳ ವ್ಯಾಪಾರಸ್ಥರು ಸೌಹಾರ್ದತೆಯಿಂದ ವ್ಯಾಪಾರ ಮಾಡುತ್ತಿದ್ದಾರೆ. ಹಿಂದೂಗಳ ಜಾತ್ರೆ, ಮಹೋತ್ಸವ, ಮುಸ್ಲಿಮರ ಉರೂಸ್, ಕ್ರಿಶ್ಚಿಯನ್ನರ ಚರ್ಚ್ ಮಹೋತ್ಸವಗಳಲ್ಲಿ ಎಲ್ಲಾ ಜಾತಿ, ಜನಾಂಗದ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಾ ಬಂದಿದ್ದಾರೆ. ಎಲ್ಲರೂ ಅನ್ಯೋನ್ಯತೆಯಿಂದ ಬದುಕುತ್ತಿದ್ದಾರೆ. ಇದನ್ನು ಸಹಿಸಲಾಗದೆ ಸಂಘಪರಿವಾರ ಮುಸ್ಲಿಮ್ ವ್ಯಾಪಾರಿಗಳ ಮೇಲೆ ನಿಷೇಧ ಹೇರಿದೆ. ಇದನ್ನು ಮಾಧ್ಯಮಗಳು ಕೂಡ ಧರ್ಮಯುದ್ಧ, ಧರ್ಮ ದಂಗಲ್ ಎಂದು ಕರೆಯುತ್ತಿರುವುದು ಸರಿಯಲ್ಲ. ಇದು ಹಿಂದೂ-ಮುಸ್ಲಿಮರ ನಡುವಿನ ಸಂಘರ್ಷವಲ್ಲ. ಇದು ಸಂಘಪರಿವಾರ ಸೃಷ್ಟಿಸಿದ ಕಿಡಿಗೇಡಿ ಕೃತ್ಯವಾಗಿದೆ. ಇದರ ವಿರುದ್ಧ ರಾಜ್ಯ ಪೊಲೀಸ್ ಇಲಾಖೆ ತಕ್ಷಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಅಬ್ದುಲ್ ಮಜೀದ್ ಒತ್ತಾಯಿಸಿದರು.

ಈ ಮಧ್ಯೆ ಹಲಾಲ್ ವಿಷಯವನ್ನು ವಿವಾದವಾಗಿಸಲಾಗಿದೆ. ಮುಸ್ಲಿಮರು ಮಾಂಸಕ್ಕಾಗಿ ಪ್ರಾಣಿಗಳನ್ನು ಕೊಲ್ಲುವಾಗ ಅದರ ಎರಡು ರಕ್ತ ನಾಳಗಳನ್ನು ಕತ್ತರಿಸುತ್ತಾರೆ. ರಕ್ತನಾಳಗಳಿಂದ ರಕ್ತ ಸಂಪೂರ್ಣವಾಗಿ ಬಸಿದುಹೋಗಬೇಕು ಎಂಬ ಉದ್ದೇಶದಿಂದ ಈ ರೀತಿ ಮಾಡಲಾಗುತ್ತದೆ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ ಎಂದು ಹೇಳಿದ ಅವರು, ಮುಸ್ಲಿಮರು ಯಾವುದೇ ಒಳ್ಳೆಯ ಕೆಲಸ ಮಾಡುವಾಗ ದೇವರ ಸ್ಮರಣೆಯೊಂದಿಗೆ ಮಾಡುತ್ತಾರೆ. ಅದೇ ರೀತಿ ಪ್ರಾಣಿಗಳನ್ನು ಕೊಲ್ಲುವಾಗಲೂ ದೇವರ ಹೆಸರನ್ನು ಸ್ಮರಿಸುತ್ತಾರೆ. ಇದನ್ನು ವಿವಾದವಾಗಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಹಲಾಲ್ ವಿರುದ್ಧವಾಗಿ ಕರಪತ್ರ ವಿತರಿಸುವ ಮೂಲಕ ಸಮುದಾಯಗಳ ನಡುವೆ ದ್ವೇಷ ಹಬ್ಬಿಸಲಾಗುತ್ತಿದೆ. ಇದು ಕ್ರಿಮಿನಲ್ ಅಪರಾಧವಾಗಿದ್ದು, ಪೊಲೀಸ್ ಇಲಾಖೆ ತಕ್ಷಣ ಇಂತಹವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಟಿಪ್ಪು ಸುಲ್ತಾನ್ ದೂರದೃಷ್ಟಿಯ ಅರಸನಾಗಿದ್ದು, ಅವರ ವಿರುದ್ಧ ಅಪಪ್ರಚಾರ ನಡೆಸುವುದು ನೀಚತನದ ಪರಮಾವಧಿಯಾಗಿದೆ. ಟಿಪ್ಪು ಈ ನಾಡಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಟಿಪ್ಪು ಓರ್ವ ಮುಸ್ಲಿಮ್ ಎಂಬ ಕಾರಣಕ್ಕೆ ಅವರನ್ನು ಹಿಂದೂ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿರುವ ಬಿಜೆಪಿ ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಕಾಶ್ಮೀರ್ ಫೈಲ್ ಎಂಬ ಚಿತ್ರವನ್ನು ವೈಭವೀಕರಿಸಿ ಉಚಿತವಾಗಿ ಪ್ರದರ್ಶನ ಏರ್ಪಡಿಸುತ್ತಿದೆ. ಕಾಶ್ಮೀರಿ ಪಂಡಿತರ ಪುನರ್ ವಸತಿಗಾಗಿ ಯಾವ ಯೋಜನೆಯನ್ನೂ ಮಾಡದ ಬಿಜೆಪಿ, ಮೆಹಬೂಬಾ ಮುಫ್ತಿಯವರ ಪಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದನ್ನು ಮರೆತಿದೆಯೇ ಎಂದು ಅವರು ಪ್ರಶ್ನಿಸಿದರು.

ರಾಜ್ಯ ಸರ್ಕಾರ ಪರಿಹಾರ ವಿತರಣೆಯಲ್ಲೂ ತಾರತಮ್ಯವೆಸಗುತ್ತಿದೆ. ಸಂಘಪರಿವಾರದ ಕಾರ್ಯಕರ್ತ ಹರ್ಷ ಹತ್ಯೆಯಾದಾಗ ಸರ್ಕಾರ 25 ಲಕ್ಷ ರೂ.ಪರಿಹಾರ ನೀಡಿದೆ. ಆದರೆ ಸಂಘಪರಿವಾರದಿಂದ ಗದಗದಲ್ಲಿ ಸಮೀರ್, ಬೆಳ್ತಂಗಡಿಯಲ್ಲಿ ದಿನೇಶ್ ಕನ್ಯಾಡಿ ಹತ್ಯೆಯಾದಾಗ ಅವರಿಗೆ ಪರಿಹಾರ ನೀಡದೆ ತಾರತಮ್ಯವೆಸಗಿದೆ. ಈ ಎಲ್ಲಾ ವೈಫಲ್ಯ ಮತ್ತು ಅನ್ಯಾಯಗಳನ್ನು ಖಂಡಿಸಿ ಏಪ್ರಿಲ್ 1ರಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಉಪಸ್ಥಿತರಿದ್ದರು.



Join Whatsapp