ಬೆಂಗಳೂರು: ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಆರೋಪಗಳ ಸುರಿಮಳೆಗೈದಿರುವ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ಪೊಲೀಸ್ ಇಲಾಖೆಯಲ್ಲಿ ಅಕ್ರಮ ನೇಮಕಾತಿ ಮತ್ತು ವರ್ಗಾವಣೆಯ ಕುರಿತು ಗುಡುಗಿದ್ದಾರೆ. ಕಲ್ಲಡ್ಕದ ಭಯೋತ್ಪಾದಕನ ಆದೇಶದಂತೆ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ನಡೆಯುತ್ತಿರುವುದು ದುರಂತ ಎಂದಿದ್ದಾರೆ. ಸಂಘಪರಿವಾರದ ಕೇಶವ ಕೃಪಕ್ಕೆ ವರ್ಗಾವಣೆಯ ಹಣ ನೇರವಾಗಿ ಸಂದಾಯವಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪೊಲೀಸ್ ಇಲಾಖೆಗಳಲ್ಲಿ ಆಗುತ್ತಿರುವ ಲಂಚ, ಭ್ರಷ್ಟಾಚಾಗಳ ಬಗ್ಗೆ ರಾಜ್ಯದ ಪ್ರಮುಖ ಪತ್ರಿಕೆಗಳು ವರದಿ ಪ್ರಕಟಿಸುತ್ತಿದೆ. ನೇಮಕಾತಿ, ವರ್ಗಾವಣೆಯಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದೆ. ಸರ್ಕಾರವು ಸುಪ್ರೀಂ ಕೋರ್ಟ್ ನ ನಿಯಮಗಳನ್ನ ಗಾಳಿಗೆ ತೂರಿ ವರ್ಗಾವಣೆ ನಡೆಸುತ್ತಿದೆ. ಭ್ರಷ್ಟಾಚಾರ ನಡೆಸಿ ವರ್ಗಾವಣೆ ಆದ ಪೊಲೀಸರು ಠಾಣೆಗಳಲ್ಲಿ ಲಂಚ ತೆಗೆದುಕೊಳ್ಳದೆ ಕೆಲಸಗಳನ್ನೇ ಮಾಡುವುದಿಲ್ಲ ಎಂದು ಆರೋಪಿಸಿದರು.
ಅಧಿಕಾರಿಗಳ ಮೇಲೆ ಯಾವುದೇ ಕ್ರಮಗಳನ್ನು ಸರಕಾರ ತೆಗೆದುಕೊಳ್ಳುದೆ ನಿರ್ಲಕ್ಷ ವಹಿಸುತ್ತಿದ್ದು , ಅಕ್ರಮ ನೇಮಕಾತಿ ಮತ್ತು ವರ್ಗಾವಣೆಯ ಹಿಂದೆ ಲಕ್ಷ-ಕೋಟಿಯ ವ್ಯವಹಾರ ನಡೆಯುತ್ತಿದೆ ಎಂದರು. ಎಲ್ಲದಕ್ಕೂ ಸಾಕ್ಷ್ಯ ಕೇಳುವ ಸರಕಾರಕ್ಕೆ ತನಿಖಾ ತಂಡಗಳಿಲ್ಲವೇ ಎಂದು ಸರಕಾರದ ವಿರುದ್ಧ ಗರಂ ಆದರು.
ಪಿಎಸ್ ಐ ಅಭ್ಯರ್ಥಿಗಳು ನೇಮಕಾತಿಗಳಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಹೋರಾಟ ನಡೆಸುತ್ತಿದ್ದಾರೆ. ಇದರ ಬಗ್ಗೆ ಪತ್ರಿಕೆಯಲ್ಲಿ ಸುದೀರ್ಘವಾಗಿ ದಾಖಲೆಗಳಿವೆ. ಅಭ್ಯರ್ಥಿಗಳು ಉತ್ತರ ಪತ್ರಿಕೆಗೆ ಅರ್ಜಿ ಸಲ್ಲಿಸುವಂತೆ ಗೃಹ ಸಚಿವರು ಕೇಳಿಕೊಳ್ಳುತ್ತಿದ್ದಾರೆ. ಆದರೆ ಪೊಲೀಸ್ ಮಹಾ ನಿರ್ದೇಶಕರು ಉತ್ತರ ಪತ್ರಿಕೆ ಕೊಡೋಕೆ ಆಗುವುದಿಲ್ಲ ಎನ್ನುತ್ತಾರೆ, ಪೊಲೀಸ್ ಇಲಾಖೆಯೇ ದಿಕ್ಕು ತಪ್ಪಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.