ರೇವಾ (ಮಧ್ಯಪ್ರದೇಶ): ಮೃತಪಟ್ಟ ಸಂಬಂಧಿ ಮಹಿಳೆಯ ಮೃತದೇಹವನ್ನು ಸಾಗಿಸಲು ಆ್ಯಂಬುಲೆನ್ಸ್ ಲಭಿಸದ ಕಾರಣ ನಾಲ್ಕು ಮಹಿಳೆಯರು ಮಂಚದಲ್ಲಿ ಸಾಗಿಸಿದ ಹೃದ್ಯಯ ವಿದ್ರಾವಕ ಘಟನೆ ಮಧ್ಪ್ರದೇಶಸದ ರೇವಾ ಎಂಬಲ್ಲಿಂದ ವರದಿಯಾಗಿದೆ.
ಸದ್ಯ ಘಟನೆಗೆ ಸಂಬಂಧಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.
ರೇವಾ ಜಿಲ್ಲೆಯ ರಾಯ್ ಪುರ ಎಂಬಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈ ವೇಳೆ ಮೃತದೇಹವನ್ನು ಸಾಗಿಸಲು ಆಸ್ಪತ್ರೆಯ ಸಿಬ್ಬಂದಿ ಆ್ಯಂಬುಲೆನ್ಸ್ ಅನ್ನು ಒದಗಿಸಲಿಲ್ಲ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಇದರಿಂದ ಹತಾಶರಾದ ಮೃತರ ಸಂಬಂಧಿ ನಾಲ್ಕು ಮಹಿಳೆಯರು ಮೃಹದೇಹವನ್ನು ಮಂಚದಲ್ಲಿ ಹೊತ್ತು ಅಂತ್ಯಕ್ರಿಯೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಈ ಮಧ್ಯೆ ಮಹಿಳೆಯರ ಆರೋಪವನ್ನು ತಳ್ಳಿಹಾಕಿರುವ ಮುಖ್ಯ ವೈದ್ಯಾಧಿಕಾರಿ ಬಿ.ಎಲ್.ಮಿಶ್ರಾ, ಆ್ಯಂಬುಲೆನ್ಸ್ ವ್ಯವಸ್ಥೆಗೊಳಿಸಲಾಗಿದ್ದರೂ ಕೂಡ ಮಹಿಳೆಯರು ಮಂಚದಲ್ಲೇ ಶವ ಸಾಗಿಸಿದ್ದಾರೆ ಎಂದು ತಿಳಿಸಿದ್ದಾರೆ.
ಘಟನೆಯ ಕುರಿತು ಜಿಲ್ಲಾ ಆರೋಗ್ಯ ಅಧಿಕಾರಿ ತನಿಖೆ ಕೈಗೊಂಡಿದ್ದು, ಗ್ರಾಮದಲ್ಲಿನ ವಾಹನದ ಕೊರತೆಯೇ ಈ ಸಮಸ್ಯೆಗೆ ಮೂಲ ಕಾರಣ ಎಂದು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.