ಒಟ್ಟು ಮೀಸಲಾತಿ ಪ್ರಮಾಣ ಹೆಚ್ಚಿಸಿ ಎಲ್ಲಾ ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಿ: ಸಿದ್ದರಾಮಯ್ಯ

Prasthutha|

ಬೆಂಗಳೂರು: ಒಟ್ಟು ಮೀಸಲಾತಿ ಪ್ರಮಾಣವನ್ನು ಶೇ. 50 ಕ್ಕಿಂತ ಹೆಚ್ಚು ಮಾಡುವ ಮೂಲಕ ಎಲ್ಲಾ ಸಮುದಾಯದ ಜನರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಸಂವಿಧಾನಬದ್ಧವಾದ ಮೀಸಲಾತಿ ಸೌಲಭ್ಯ ಸಿಗುವಂತಾಗಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

- Advertisement -


ಎಸ್ ಟಿ ಮೀಸಲಾತಿ ಹೆಚ್ಚಳ ಸಂಬಂಧ ಇಂದಿನ ಅಧಿವೇಶನದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಇಂದಿರಾ ಸಹಾನಿ ಪ್ರಕರಣದಲ್ಲಿ ಮೀಸಲಾತಿ ಪ್ರಮಾಣ ಶೇ. 50 ಮೀರಬಾರದು ಎಂದು ಸುಪ್ರೀಂ ಕೋರ್ಟ್ ಆದೇಶವಿದೆ, ಅದೇ ರೀತಿ ಮುಂದುವರೆದು ಕೆಲವು ವಿಶೇಷ ಸಂದರ್ಭದಲ್ಲಿ ಮೇಲ್ಕಂಡ ಮಿತಿಗಿಂತ ಹೆಚ್ಚಿನ ಮೀಸಲಾತಿ ನೀಡಬಹುದು ಎಂದು ಕೂಡ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಇಂದಿರಾ ಸಹಾನಿ ಪ್ರಕರಣದಲ್ಲಿ ನೀಡಿದ ತೀರ್ಪಿನಂತೆ ಮೀಸಲಾತಿ ಪದ್ಧತಿ ಈಗಿಲ್ಲ. ಸಾಮಾನ್ಯ ವರ್ಗದ ಜನರಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ 10% ಮೀಸಲಾತಿ ನೀಡಿರುವುದರಿಂದ ಈಗಿನ ಮೀಸಲಾತಿ ಪ್ರಮಾಣ ಶೇ. 60ರ ಆಸುಪಾಸಿದೆ ಎಂದರು.
ಸಂವಿಧಾನದ 15 ನೇ ಪರಿಚ್ಛೇದವು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿ ನೀಡಲು ಅವಕಾಶ ನೀಡಿದೆ.

- Advertisement -

ಆರ್ಥಿಕ ಸ್ಥಿತಿ ಆಧರಿಸಿ ಮೀಸಲಾತಿ ನೀಡಬಹುದು ಎಂದು ಸಂವಿಧಾನದಲ್ಲಿ ಇಲ್ಲದಿದ್ದರೂ ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗಗಳಿಗೂ ಮೀಸಲಾತಿ ಸೌಲಭ್ಯ ವಿಸ್ತರಿಸಿದೆ. ನಾಗಮೋಹನ್ ದಾಸ್ ಅವರ ಸಮಿತಿ ಪರಿಶಿಷ್ಟ ಪಂಗಡಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 7% ಮೀಸಲಾತಿ ನೀಡಬೇಕು ಎಂದು ಶಿಫಾರಸು ಮಾಡಿದೆ. ರಾಜ್ಯದಲ್ಲಿ ಎಸ್.ಟಿ ಜನಸಂಖ್ಯೆ 6.95%, ಎಸ್.ಸಿ ಜನಸಂಖ್ಯೆ 17.15% ಇದೆ. ಒಟ್ಟು ಅವರ ಜನಸಂಖ್ಯೆಗೆ ಅನುಗುಣವಾಗಿ 24.1% ಮೀಸಲಾತಿ ನೀಡಲು ಸಂವಿಧಾನಬದ್ಧವಾಗಿ ಅವಕಾಶವಿದೆ. ನಾಗಮೋಹನ್ ದಾಸ್ ಅವರ ಸಮಿತಿ ಕೂಡ ಒಟ್ಟು ಮೀಸಲಾತಿ ಪ್ರಮಾಣವನ್ನು 50% ಗಿಂತ ಹೆಚ್ಚು ಮಾಡಿ, ಒಬ್ಬರ ಮೀಸಲಾತಿಯನ್ನು ಕಿತ್ತು ಇನ್ನೊಬ್ಬರಿಗೆ ಕೊಡುವುದು ಬೇಡ, ಒಟ್ಟು ಮೀಸಲಾತಿ ಪ್ರಮಾಣವನ್ನೇ ಹೆಚ್ಚಿಸಬೇಕು ಎಂದು ಶಿಫಾರಸ್ಸು ಮಾಡಿದೆ. ಆ ನಂತರ 3ಬಿ ಇಂದ 2ಎ ಗೆ, 2ಎ ನಲ್ಲಿ ಇದ್ದವರನ್ನು ಎಸ್.ಟಿ ಗೆ ಸೇರಿಸಲು ಸುಭಾಷ್ ಹಾಡಿ ಅವರ ಅಧ್ಯಕ್ಷತೆಯಲ್ಲಿ ಸರ್ಕಾರ ಸಮಿತಿ ರಚಿಸಿ, ವರದಿ ನೀಡುವಂತೆ ಕೇಳಿದೆ. ಇದು ಸಂವಿಧಾನಿಕವೋ? ಇಲ್ಲವೋ? ಎಂಬ ಬಗ್ಗೆ ನನಗೆ ಪೂರ್ಣ ಮಾಹಿತಿ ಇಲ್ಲ, ಕಾರಣ ರಾಜ್ಯದಲ್ಲಿ ಈಗಾಗಲೇ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಇದೆ ಎಂದು ವಿವರಿಸಿದರು.


ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಅವರು ಕಳೆದ 49 ದಿನಗಳಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ಕೂತಿದ್ದಾರೆ. ಸರ್ಕಾರ ಅವರ ಬೇಡಿಕೆಗಳ ಈಡೇರಿಕೆಗೆ ಮುಕ್ತವಾಗಿದೆ ಎಂದು ಹೇಳಿದರೆ ಸಾಲದು ಅಲ್ಲಿಗೆ ಹೋಗಿ ಧರಣಿ ಕೈಬಿಡುವಂತೆ ಶ್ರೀಗಳ ಮನವೊಲಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಸಚಿವ ಶ್ರೀರಾಮುಲು ಅವರು ತಾವು ಅಧಿಕಾರಕ್ಕೆ ಬಂದ 24 ಗಂಟೆಗಳ ಒಳಗೆ ವಾಲ್ಮೀಕಿ ಸಮುದಾಯದ ಮೀಸಲಾತಿಯನ್ನು ಹೆಚ್ಚಿಸುತ್ತೇನೆ, ಇದನ್ನು ರಕ್ತದಲ್ಲಿ ಬೇಕಾದರೂ ಬರೆದುಕೊಡ್ತೇನೆಂದು ಚುನಾವಣೆಗೆ ಮೊದಲು ಉತ್ಸಾಹದಲ್ಲಿ ಹೇಳಿದ್ದರು. ತಮಿಳುನಾಡಿನಲ್ಲಿ ಮೀಸಲಾತಿ ಪ್ರಮಾಣ 69% ಗೆ ಹೆಚ್ಚಿಸಿದ್ದಾರೆ, ಇದು ಸುಪ್ರೀಂ ಕೋರ್ಟ್ ನ ಮುಂದಿದೆ. ಬೇರೆ ಬೇರೆ ರಾಜ್ಯಗಳು ಕೂಡ 50% ಗಿಂತ ಹೆಚ್ಚು ಮೀಸಲಾತಿ ನೀಡಿವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಮೀಸಲಾತಿ ಪ್ರಮಾಣ ಏರಿಕೆ ಮಾಡಲು ಅವಕಾಶ ಇದೆ. ರಾಜ್ಯ ಸರ್ಕಾರ ಸುಭಾಷ್ ಆಡಿಯವರ ನೇತೃತ್ವದ ಸಮಿತಿಯ ವರದಿಯನ್ನು ಪಡೆದುಕೊಳ್ಳಲಿ, ಇದರ ಜೊತೆಗೆ ಮೀಸಲಾತಿ ಪ್ರಮಾಣವನ್ನು ಶೇ. 50 ಕ್ಕಿಂತ ಹೆಚ್ಚು ಮಾಡಲಿ. ಇಲ್ಲದಿದ್ದರೆ ಪರಿಶಿಷ್ಟ ಪಂಗಡದ ಜನರಿಗೆ ಅನ್ಯಾಯವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು.




Join Whatsapp