ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಯರ ವೀಡಿಯೋ ಚಿತ್ರೀಕರಿಸಿ ಹರಿಯಬಿಟ್ಟ ಪತ್ರಕರ್ತರ ವಿರುದ್ಧ ಎಫ್ಐಆರ್ ದಾಖಲು

Prasthutha|

ಜಮಖಂಡಿ: ಶಾಲೆಯ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಲ್ಲಿದ್ದಾಗ ಅನಧಿಕೃತವಾಗಿ ಶಾಲೆಯ ಆವರಣದೊಳಗೆ ಪ್ರವೇಶಿಸಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳ ವೀಡಿಯೋ ಚಿತ್ರೀಕರಣ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಪತ್ರಕರ್ತರ ವಿರುದ್ಧ ಎಫ್ ಐಆರ್ ದಾಖಲಾಗಿದೆ.

- Advertisement -

ಕನ್ನಡಪ್ರಭ ಪತ್ರಿಕೆಯ ವರದಿಗಾರ ಗುರುರಾಜ ವಾಳ್ವೇಕರ ಹಾಗೂ ಯಶವಂತ ಕಲುಟಿ ವಿರುದ್ಧ ಜಮಖಂಡಿ ಶಹರ ಪೊಲೀಸ್  ಠಾಣೆಯಲ್ಲಿ ಐಪಿಸಿ ಸೆಕ್ಷನ್ 441, 341, 353, 504, 506, 34 ಐಪಿಸಿ ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿಗಳ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಎಸ್ ಡಿಪಿಐ ನಾಯಕರು ತಹಶೀಲ್ದಾರ್ ಅವರಿಗೆ ದೂರು ನೀಡಿದ್ದರು.

- Advertisement -

ಜಮಖಂಡಿಯ ಸರಕಾರಿ ಪಿ.ಬಿ. ಹಾಗೂ ಜಿ.ಜಿ. ಹೈಸ್ಕೂಲ್ ನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆದ ಆರಂಭದಲ್ಲಿ ಕೊಠಡಿಗಳ ಆವರಣದಲ್ಲಿ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ವಿಧಿಸಿದರೂ ಪರೀಕ್ಷಾ ಅಧಿಕಾರಿಗಳ ಅನುಮತಿ ಪಡೆಯದೇ ಸ್ಥಳೀಯ ವರದಿಗಾರ ಗುರುರಾಜ ವಾಣೀಕರ ಹಾಗೂ ಸಂಗಡಿಗರು ಮೊಬೈಲ್ ವಿಡಿಯೂ ಮಾಡಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಹಿನ್ನೆಲೆಯಲ್ಲಿ ಅವರನ್ನು ಪೋಕ್ಸೋ ಕಾಯ್ದೆ ಅಡಿಯಲ್ಲಿ ಬಂಧಿಸಬೇಕು ಎಂದು ಗ್ರೇಡ್ 2 ತಹಶೀಲ್ದಾರ್ ಸತೀಶ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು.

ವಿದ್ಯಾರ್ಥಿಗಳಿಗೆ ಭಯದ ವಾತಾವರಣ ಸೃಷ್ಟಿಸಿ, ಮೇಲ್ವಿಚಾರಕರ ಮೇಲೆ ದಬ್ಬಾಳಿಕೆ ಮಾಡಿ ವಿಡಿಯೋ ಚಿತ್ರಿಕರಣ ಮಾಡಿರುವುದು ಅಕ್ಷಮ. ಕೊಠಡಿಗಳಿಗೆ ನುಗ್ಗಿ ಪರೀಕ್ಷೆಯ ಕನ್ನಡ ವಿಷಯದ ಪ್ರಶ್ನೆ ಪತ್ರಿಕೆ ವಿತರಣೆ ಮಾಡುವ ವೇಳೆಯಲ್ಲಿ ಕೃತ್ಯ ಮಾಡಲಾಗಿದೆ.  ಅಲ್ಲದೇ ಅಪ್ರಾಪ್ತ ವಯಸ್ಸಿನ ಮಕ್ಕಳ ಫೋಟೊ ತೆಗೆದು ಅದನ್ನು ಹರಿಯಬಿಡುವುದು ಪೋಕ್ಸೋ ಕಾಯ್ದೆ ಪ್ರಕಾರ ಅಪರಾಧವಾಗಿದೆ. ಅಲ್ಲದೇ ವಿದ್ಯಾರ್ಥಿನಿಯರಲ್ಲಿಯೂ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ. ತಪ್ಪಿತಸ್ಥ ವರದಿಗಾರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ವಿರುದ್ಧ  ಮೇಲೆ ಕಾನೂನು ಹೋರಾಟ ಮಾಡಲಾಗುವುದು ಎಂದು ಎಸ್ ಡಿಪಿಐ ಜಿಲ್ಲಾಧ್ಯಕ್ಷ ಸಲೀಂ ಅವಟಿ ಹಾಗೂ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ರಾಜು ಮೇಲಿನಕೇರಿ ಎಚ್ಚರಿಕೆ ನೀಡಿದ್ದರು. ಈ ಸಂದರ್ಭದಲ್ಲಿ ನ್ಯಾಯವಾದಿ ದೊಡ್ಡಮನಿ, ಎಸ್ ಡಿಪಿಐ ಮುಖಂಡರಾದ ರಾಜು ತಾಳಿಕೋಟಿ, ಆಯಾಝ್ ಸೈಯ್ಯದ್ ಉಪಸ್ಥಿತರಿದ್ದರು.




Join Whatsapp