ಇಸ್ಲಾಮಾಬಾದ್: ಪ್ರಧಾನಿ ಇಮ್ರಾನ್ ಖಾನ್ ಬಹುಮತ ಕಳೆದುಕೊಂಡಿದ್ದಾರೆ ಎಂದು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ನಾಯಕ ಬಿಲಾವಲ್ ಭುಟ್ಟೋ ಜರ್ದಾರಿ ಟ್ವೀಟ್ ಮಾಡಿದ್ದಾರೆ.
ಮಂಗಳವಾರ ರಾತ್ರಿ ಮೈತ್ರಿ ಕೂಟ ಸರಕಾರದ ಪ್ರಮುಖ ಪಕ್ಷವೊಂದು ಹೊರ ನಡೆದುದರಿಂದ ಬಹುಮತ ನಷ್ಟವಾಗಿದೆ ಎನ್ನಲಾಗಿದೆ.
ಮುತ್ತಹಿದಾ ಕ್ವಾಮಿ ಮೂವ್ ಮೆಂಟ್ ಪಾಕಿಸ್ತಾನ್ ಪಕ್ಷವು ವಿರೋಧ ಪಕ್ಷಗಳ ಜೊತೆ ಸೇರಿಕೊಂಡು ಒಪ್ಪಂದ ಮಾಡಿಕೊಂಡಿದೆ ಎಂದ ಡಾನ್ ಪತ್ರಿಕೆ ವರದಿ ಮಾಡಿದೆ. ಆದರೆ ಅದನ್ನು ಕೊನೆಯ ನಿಮಿಷದಲ್ಲಿ ಘೋಷಿಸಲಿದೆ ಎಂದೂ ಹೇಳಲಾಗಿದೆ.
ಎಂಕ್ಯೂಎಂ ನಮ್ಮ ಜೊತೆ ಒಪ್ಪಂದ ಮಾಡಿಕೊಂಡಿದೆ. ಆದ್ದರಿಂದ ಇಮ್ರಾನ್ ರ ಮೈತ್ರಿ ಕೂಟ ಸರಕಾರ ಬಹುಮತ ಕಳೆದುಕೊಂಡಿದೆ ಎಂದು ಬಿಲಾವಲ್ ಭುಟ್ಟೋ ಟ್ವೀಟಿಸಿದ್ದಾರೆ. ಬೇಗನೆ ಪತ್ರಿಕಾಗೋಷ್ಠಿ ನಡೆಸಿ ಇದನ್ನು ಘೋಷಿಸುವುದಾಗಿಯೂ ಅವರು ಮಾಹಿತಿ ನೀಡಿದ್ದಾರೆ.
ಮಾರ್ಚ್ 8ರಂದು ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಲು ಹೊರಟಾಗಿನಿಂದ ಪಾಕಿಸ್ತಾನ ಸರಕಾರದ ಸ್ಥಿತಿ ಡೋಲಾಯಮಾನವಾಗಿದೆ. ಇಮ್ರಾನ್ ನಾಯಕತ್ವದ ತೆಹ್ರಿಕ್ ಎ ಇನ್ಸಾಫ್ ಸರಕಾರದ ಆಡಳಿತವು ದೇಶದಲ್ಲಿ ಹಣದುಬ್ಬರ ಮತ್ತು ಹಣಕಾಸಿನ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ.
69ರ ಇಮ್ರಾನ್ ಖಾನ್ ಮೈತ್ರಿಕೂಟ ಸರಕಾರ ನಡೆಸುತ್ತಿದ್ದು, ಸಣ್ಣ ಪಕ್ಷಗಳು ಈಗಾಗಲೇ ಕೆಲವು ಪ್ರತಿ ಪಕ್ಷಗಳತ್ತ ಜಿಗಿದಿವೆ. 342 ಸದಸ್ಯರ ರಾಷ್ಟ್ರೀಯ ಸಂಸತ್ತಿನಲ್ಲಿ ಬಹುಮತಕ್ಕೆ 172 ಅಗತ್ಯವಿದ್ದು, ಈಗ ಇಮ್ರಾನ್ ಪರ 155 ಜನರು ಮಾತ್ರ ಉಳಿದಿದ್ದಾರಂತೆ.
ಡಾನ್ ವರದಿ ಪ್ರಕಾರ ಇಮ್ರಾನ್ ಸರಕಾರ 171 ಸದಸ್ಯರ ಬೆಂಬಲ ಉಳಿಸಿಕೊಂಡಿದೆ. ಜಮಾತ್ ನ ಕೈಕ ಸದಸ್ಯರು ನಿರ್ಣಾಯಕ ಮತ ಹೊಂದಿದ್ದಾರೆ. ಆದರೆ ಈಗಿನ ವರದಿಯಂತೆ ಎಂಕ್ಯೂಎಂ-ಪಿ ಹೊರ ಹೋದರೆ ಇಮ್ರಾನ್ ರ ಇನ್ನಿಂಗ್ಸ್ ಮುಗಿದಂತೆ.