ಉಡುಪಿ: ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಬೆಳೆಸುವಂತೆ ಉಡುಪಿ ಜಿಲ್ಲಾ ಸೌಹಾರ್ದ ಸಮಿತಿ ವತಿಯಿಂದ ವಿವಿಧ ಧರ್ಮದ ಮುಖಂಡರು ಬುಧವಾರ ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಉಡುಪಿ ಶಾಂತಿ ಮತ್ತು ಸೌಹಾರ್ದತೆಗೆ ಹೆಸರುವಾಸಿಯಾದ ಜಿಲ್ಲೆಯಾಗಿದ್ದು, ಇತ್ತೀಚೆಗೆ ಈ ಮೌಲ್ಯಗಳಿಗೆ ವಿರುದ್ಧವಾದ ಘಟನೆಗಳು ನಡೆಯುತ್ತಿವೆ. ಅನೋನ್ಯತೆಯಿಂದ ಇದ್ದ ವ್ಯಾಪಾರಿ ಸಮುದಾಯದವರ ನಡುವೆ ಗೊಂದಲ ಏರ್ಪಡಿಸುವ ಕಾರ್ಯ ನಡೆಯುತ್ತಿದೆ. ಇಲ್ಲಿನ ಸರ್ವ ಸಮುದಾಯದ ಬಾಂಧವರು ಇದಕ್ಕೆ ಶಾಂತಿಯುತ ಪರಿಹಾರ ಬಯಸುತ್ತಿದ್ದಾರೆ ಎಂದು ಮನವಿ ಯಲ್ಲಿ ತಿಳಿಸಲಾಗಿದೆ.
ಉಡುಪಿ ಶೋಕಾ ಮಾತಾ ಇಗರ್ಜಿಯ ಧರ್ಮಗುರು ಫಾ.ಚಾರ್ಲ್ಸ್, ಸಾಮಾಜಿಕ ಕಾರ್ಯಕರ್ತ ಹಾಜಿ ಅಬ್ದುಲ್ಲಾ ನಾವುಂದ, ಬಳಕೆದಾರರ ವೇದಿಕೆಯ ಗೌರವಾಧ್ಯಕ್ಷ ಹಾಜಿ ಅಬೂಬಕ್ಕರ್, ಗಂಗಾಧರ್ ರಾವ್, ಮುಹಮ್ಮದ್ ಮೌಲಾ, ಅಬೂಬಕ್ಕರ್ ನೇಜಾರು, ಬೀದಿಬದಿ ವ್ಯಾಪಾರ ಮತ್ತು ಜಾತ್ರೆ ವ್ಯಾಪರಸ್ಥರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರೀಫ್, ನಿಸಾರ್ ಅಹ್ಮದ್ ಮೊದಲಾದವರು ಉಪಸ್ಥಿತರಿದ್ದರು.