ತುಮಕೂರು: ಸಿದ್ಧಗಂಗಾ ಮಠಕ್ಕೆ ನಾಳೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭೇಟಿ ನೀಡಲಿದ್ದು, ಸ್ವಾಗತಕ್ಕೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ.
ಸಿದ್ಧಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಜಯಂತಿ ಕಾರ್ಯಕ್ರಮ ಏ. 1ರಂದು ನಡೆಯಲಿದ್ದು, ಅದಕ್ಕೂ ಮೊದಲೇ ಮಾರ್ಚ್ 31ರಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಠಕ್ಕೆ ಭೇಟಿ ನೀಡಲಿದ್ದಾರೆ. ಮಠದಲ್ಲಿ ಸ್ವಾಮೀಜಿ ಆಶೀರ್ವಾದ ಪಡೆಯುವುದನ್ನು ಹೊರತುಪಡಿಸಿದರೆ ಬೇರೆ ಯಾವುದೇ ಸಭೆ, ಸಮಾರಂಭ ಇರುವುದಿಲ್ಲ. ಕಾರ್ಯಕರ್ತರ ಸಭೆಯೂ ಇರುವುದಿಲ್ಲ. ಮಠದ ಭೇಟಿ ನಂತರ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.
ಬೆಂಗಳೂರಿನಿಂದ ರಸ್ತೆ ಮೂಲಕ ಮಠಕ್ಕೆ ಬರಲಿದ್ದಾರೆ. ಅಲ್ಲಲ್ಲಿ ಕಾರ್ಯಕರ್ತರು ಸ್ವಾಗತಿಸಲಿದ್ದಾರೆ. ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ ಸ್ವಾಗತಿಸಿ, ಮಠಕ್ಕೆ ಕರೆದುಕೊಂಡು ಹೋಗಲಾಗುತ್ತದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.