ಸರ್ಕಾರಿ ಶಾಲೆಗಳನ್ನು ಮುಚ್ಚಿ ಗುರುಕುಲ ನಡೆಸುವ ಹುನ್ನಾರ: ಸಾಹಿತಿ ಕೆ.ಶರೀಫಾ

Prasthutha|

ಮಂಗಳೂರು: ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿಕೊಂಡು ಜಾತ್ರೆ, ಮಹೋತ್ಸವಗಳಲ್ಲಿ ವ್ಯಾಪಾರ ಮಾಡದಂತೆ ಕೆಲವು ಶಕ್ತಿಗಳು ತಡೆಯುತ್ತಿದ್ದರೂ ಸರ್ಕಾರ ಅವರ ವಿರುದ್ಧ ಕ್ರಮಕೈಗೊಳ್ಳದೆ ಮೌನಕ್ಕೆ ಶರಣಾಗಿರುವುದು ವಿಷಾದನೀಯ.

- Advertisement -

ಹಿಂದೂಯೇತರರಿಗೆ ವ್ಯಾಪಾರ ನಿಷಿದ್ಧ ಎಂದು ಬ್ಯಾನರ್ ಹಾಕಿರುವವರ ವಿರುದ್ಧ ತಕ್ಷಣ ಪೊಲೀಸರು ಕ್ರಮಕೈಗೊಳ್ಳಬೇಕು ಎಂದು ಹಿರಿಯ ಸಾಹಿತಿ, ಪ್ರಗತಿಪರ ಹೋರಾಟಗಾರ್ತಿ ಕೆ.ಶರೀಫಾ ಒತ್ತಾಯಿಸಿದ್ದಾರೆ.

ಪ್ರಸ್ತುತ ನ್ಯೂಸ್ ನೊಂದಿಗೆ ಮಾತನಾಡಿದ ಅವರು, ಮುಸ್ಲಿಮರು ವ್ಯಾಪಾರ ಮಾಡುವಂತಿಲ್ಲ ಎಂದು ಹೇಳಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಯಾಕಾಗಿ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದೀರಿ, ಇಷ್ಟೆಲ್ಲಾ ನಡೆಯುತ್ತಿದ್ದರೂ ಸರ್ಕಾರ ಯಾಕೆ ಮೌನ ವಹಿಸಿದೆ ? ಇಂತಹ ಕೃತ್ಯಗಳನ್ನು ತಡೆಯಲು ಸರ್ಕಾರದ ಬಳಿ ಪೊಲೀಸರು ಇಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

- Advertisement -

ಯಾವುದೇ ಕೋಮುವಾದಿ ಕಲಹಗಳು ಮೊದಲು ಆರಂಭಗೊಳ್ಳುವುದು ಮಂಗಳೂರಿನಲ್ಲಿ. ಇದರ ಹಿಂದೆ ಬ್ಯುಸಿನೆಸ್ ಇದೆ. ಹಿಜಾಬ್ ವಿಷಯದ ಹಿಂದೆ ಕೂಡ ಆರ್ಥಿಕ ಹಿತಾಸಕ್ತಿಗಳು ಮತ್ತು ಬ್ಯುಸಿನೆಟ್ ಮೈಂಡ್ ಸೆಟ್ ಗಳಿವೆ ಎಂದು ಆರೋಪಿಸಿದ ಅವರು, ಮುಂದಿನ ದಿನಗಳಲ್ಲಿ ಖಾಸಗಿ ಕಾಲೇಜುಗಳು “ನಮ್ಮಲ್ಲಿ ಹಿಜಾಬ್ ಗೆ ಅವಕಾಶವಿದೆ” ಎಂದು ವಿದ್ಯಾರ್ಥಿಗಳನ್ನು ಸೆಳೆಯಲು ಮುಂದಾಗಲಿದೆ ಎಂದು ಭವಿಷ್ಯ ನುಡಿದರು. ಹಿಜಾಬ್ ವಿವಾದದ ಹಿಂದೆ ಆರ್ಥಿಕ ಹುನ್ನಾರವಿದ್ದು, ಇದೊಂದು ಕೆಟ್ಟ ರಾಜಕಾರಣವಾಗಿದೆ ಎಂದು ಟೀಕಿಸಿದರು.

ಹಲಾಲ್ ಕಟ್ ತಿನ್ನಬೇಡಿ ಎಂದು ಸಂಘಪರಿವಾರ ಕರೆ ನೀಡುತ್ತಿದೆ. ಹಾಗಾದರೆ ಮುಸ್ಲಿಮ್ ರಾಷ್ಟ್ರಗಳಿಂದ ಬರುವ ಪೆಟ್ರೋಲ್ ನಿಷೇಧಿಸಲು ಇವರಿಗೆ ಸಾಧ್ಯವೇ ಎಂದು ಪ್ರಶ್ನಿಸಿದ ಶರೀಫಾ, ಕೋಮುವಾದಿ ನೆಲೆಗಟ್ಟನ್ನು ಬಿಟ್ಟು ಮನುಷ್ಯತ್ವದ ಧೋರಣೆಗಳನ್ನು ತಳೆಯದೇ ಹೋದರೆ ಭವಿಷ್ಯ ಸಂಕಷ್ಟದಿಂದ ಕೂಡಿರಲಿದೆ ಎಂದು ಎಚ್ಚರಿಸಿದರು.

ಶರಣರು, ಸೂಫಿಸಂತರು ತೋರಿಸಿಕೊಟ್ಟ ಸೌಹಾರ್ದ ನಮಗೆ ಮಾದರಿಯಾಗಬೇಕೇ ಹೊರತು ಕೊಲೆಗಡುಕರ ರಾಜಕಾರಣ ನಮಗೆ ಬೇಕಿಲ್ಲ. ಇಲ್ಲಿನ ಸರ್ಕಾರಿ ಶಾಲೆಗಳೇ ಬಡ ಮಕ್ಕಳಿಗೆ ಆಧಾರ. ಸರ್ಕಾರದ ನಡೆ ನೋಡಿದರೆ, ಇಲ್ಲಿನ ಸರ್ಕಾರಿ ಶಾಲೆಗಳನ್ನು ಮುಚ್ಚಿ ಗುರುಗುಲ ನಡೆಸುವ ಹುನ್ನಾರ ನಡೆಸುತ್ತಿದೆಯೇ ಎಂಬ ಸಂಶಯ ಮೂಡುತ್ತಿದೆ ಎಂದು ಹೇಳಿದರು.

ಮುಸ್ಲಿಮ್ ಹೆಣ್ಣು ಮಕ್ಕಳು ಇತ್ತೀಚೆಗೆ ಶಾಲಾ ಕಾಲೇಜುಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಮುಸ್ಲಿಮ್ ವಿದ್ಯಾರ್ಥಿನಿಯರು 16-17 ಗೋಲ್ಡ್ ಮೆಡಲ್ ಗಳನ್ನು ಪಡೆಯುತ್ತಿರುವುದು ಹೆಮ್ಮೆ ಅನಿಸುತ್ತಿದೆ. ಇದನ್ನು ನೋಡಿ ನಾವು ಹೆಮ್ಮ ಪಡಬೇಕು. ಆ ಹೆಣ್ಣು ಮಕ್ಕಳನ್ನು ಗೌರವಿಸಬೇಕೇ ಹೊರತು ಚಿಂದಿ ಬಟ್ಟೆಯನ್ನು ಹಿಡಿದುಕೊಂಡು ಏನು ಮಾಡ್ತೀರಿ?. ಆ ಬಟ್ಟೆಗೋಸ್ಕರ ಯಾಕೆ ಹೊಡೆದಾಟ. ಹಿಜಾಬ್ ಧರಿಸಿ ಬಂದರೆ ಇವರಿಗೇನು ತೊಂದರೆ? ಎಂದು ಸಂಘಪರಿವಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ರಾಜ್ಯದ ಪ್ರಮುಖ ಸಾಹಿತಿಗಳು, ಪ್ರಗತಿಪರರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು, ಹಿಜಾಬ್ ಕಾರಣದಿಂದ ಪರೀಕ್ಷೆ ವಂಚಿತರಾದ ವಿದ್ಯಾರ್ಥಿನಿಯರಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಮುಸ್ಲಿಮರಿಗೆ ವ್ಯಾಪಾರ ನಡೆಸದಂತೆ ತಡೆಯುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದೇವೆ. ಮುಖ್ಯಮಂತ್ರಿ ನಮ್ಮ ಬೇಡಿಕೆಗೆ ಸ್ಪಂದಿಸುವ ಭರವಸೆ ಇದೆ ಎಂದು ಶರೀಫಾ ತಿಳಿಸಿದರು.

ಟಿಪ್ಪು ಸುಲ್ತಾನ್ ಅವರಿಗೆ ಮೈಸೂರು ಹುಲಿ ಎಂಬ ಬಿರುದು ನೀಡಿದವರು ಯಾರು ಎಂದು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಕೇಳಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಶರೀಫಾ, ಇತಿಹಾಸ ಗೊತ್ತಿಲ್ಲದವರನ್ನು ಸಮಿತಿಗೆ ನೇಮಕ ಮಾಡಿರುವುದರಿಂದಲೇ ಇಂತಹ ಸಮಸ್ಯೆ ಉಂಟಾಗಿದೆ. ಬ್ರಿಟಿಷರೇ ಟಿಪ್ಪುವನ್ನು “ಮೈಸೂರು ಹುಲಿ” ಎಂದು ಕರೆದಿದ್ದಾರೆ. ಇತಿಹಾಸ ಓದಿದ್ದರೆ ಚಕ್ರತೀರ್ಥ ಅವರಿಗೆ ಈ ವಿಷಯ ಅರ್ಥವಾಗುತ್ತಿತ್ತು. ಆದರೆ ಅವರು ಇತಿಹಾಸ ಓದಿಲ್ಲ ಎಂದು ಹೇಳಿದರು.



Join Whatsapp