ಮೈಸೂರು : ಮೈಸೂರಿನಿಂದ ಶ್ರೀರಂಗಪಟ್ಟಣ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಗೋಲ್ ಗುಂಬಝ್ ಎಕ್ಸ್ ಪ್ರೆಸ್ ರೈಲಿನಡಿಗೆ ಸಿಲುಕಿ 32 ಕುರಿಗಳು ಮತ್ತು ಓರ್ವ ಕುರಿಗಾಹಿ ದಾರುಣವಾಗಿ ಮೃತಪಟ್ಟ ಘಟನೆ ಶ್ರೀರಂಗಪಟ್ಟಣ ಸಮೀಪದ ಪಾಲಹಳ್ಳಿ ಹಾಗೂ ಪಶ್ಚಿಮವಾಹಿನಿಯ ನಡುವಿನ ಮಧ್ಯ ಭಾಗದಲ್ಲಿ ನಡೆದಿದೆ.
ರೈಲ್ವೇ ಹಳಿ ಪಕ್ಕದಲ್ಲಿ ಮೇಯುತ್ತಿದ್ದ ಕುರಿಗಳು ರೈಲಿನ ಹಾರ್ನ್ ಶಬ್ದಕ್ಕೆ ಹೆದರಿ ಹಳಿಯಲ್ಲಿ ಬಂದು ನಿಂತಿತ್ತು. ಈ ವೇಳೆ ರೈಲು ಬರುತ್ತಿದ್ದುದನ್ನು ಗಮನಿಸಿದ ಕುರಿಗಾಹಿ ಕುರಿಗಳನ್ನು ಓಡಿಸಲು ಬಂದಿದ್ದು, ಕುರಿಗಳ ಜೊತೆಗೆ ಆತನು ಕೂಡ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ.
ಮೃತ ವ್ಯಕ್ತಿಯನ್ನು ಪಾಂಡವಪುರ ತಾಲೂಕಿನ ನಿಂಗೇಗೌಡ ಎಂದು ಗುರುತಿಸಲಾಗಿದೆ. ಸುದ್ದಿ ತಿಳಿದು ಮೈಸೂರು ಹಾಗೂ ಶ್ರೀರಂಗಪಟ್ಟಣ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.