ಯುವ ಕಾಂಗ್ರೆಸ್ ‘ವಿಧಾನಸೌಧ ಚಲೋ’ ವೇಳೆ ಸಂಘರ್ಷ

Prasthutha|

ಗಾಂಧಿನಗರ: ನಿರುದ್ಯೋಗ ಮತ್ತು ಪ್ರಶ್ನೆ ಪತ್ರಿಕೆಗಳು ನಿರಂತರವಾಗಿ ಸೋರಿಕೆ ಅಗುತ್ತಿರುವುದನ್ನು ಪ್ರಶ್ನಿಸಿ ಗುಜರಾತ್’ನ ಯುವ ಕಾಂಗ್ರೆಸ್ ಘಟಕವು ಹಮ್ಮಿಕೊಂಡಿದ್ದ ‘ವಿಧಾನ ಸೌಧ ಚಲೋ’ ಕಾರ್ಯಕ್ರಮಕ್ಕೆ ಪೊಲೀಸರು ತಡೆಒಡ್ಡಿದ ಪರಿಣಾಮ, ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ತೀವ್ರ ಸಂಘರ್ಷ ನಡೆದಿದೆ.
ಯುವ ಕಾಂಗ್ರೆಸ್ ಕಾರ್ಯಕರ್ತರು ವಿಧಾನಸೌಧ ಪ್ರವೇಶಿಸುವುದನ್ನು ತಡೆಯಲು ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್’ಗಳನ್ನು ಹಾಕಿದ್ದರು. ಆದರೆ ಎಲ್ಲವನ್ನೂ ದಾಟಿ ಬಂದ ಕಾರ್ಯಕರ್ತರನ್ನು ತಡೆದ ಪೊಲೀಸರು, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನಾಯಕರು ಮತ್ತು ಕಾರ್ಯಕರ್ತರ ಬಂಧನಕ್ಕೆ ಮುಂದಾದ ವೇಳೆ ಸಂಘರ್ಷ ಉಂಟಾಯಿತು.
ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿವಿ, ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಹಾರ್ದಿಕ್ ಪಟೇಲ್, ಶಾಸಕ ಜಿಗ್ನೇಶ್ ಮೆವಾನಿ ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಪ್ರತಿಭಟನಾ ಸ್ಥಳದಿಂದ ಕರೆದೊಯ್ದರು.

- Advertisement -

ವಿಧಾನಸಭೆಯ ಒಳಗೂ ಕಾಂಗ್ರೆಸ್ ಪ್ರತಿಭಟನೆ
ಯುವ ಕಾಂಗ್ರೆಸ್ ಕಾರ್ಯಕರ್ತರು ವಿಧಾನಸಭೆಗೆ ಮುತ್ತಿಗೆ ಹಾಕಲು ಯತ್ನಿಸಿದ ವೇಳೆ, ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರು ಪೋಸ್ಟರ್’ಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಕಲಾಪವು 15 ನಿಮಿಷಗಳ ಕಾಲ ಸ್ಥಗಿತಗೊಂಡಿತು.
ಭಾನುವಾರ ನಡೆದ ಅರಣ್ಯ ರಕ್ಷಕ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಬಗ್ಗೆ ಚರ್ಚೆ ನಡೆಸುವಂತೆ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಶಾಸಕ ಪುಂಜಾ ವಂಶ್, ವಿಷಯ ಪ್ರಸ್ತಾಪಿಸಿ, ರಾಜ್ಯ ಸರ್ಕಾರ ನಡೆಸುತ್ತಿರುವ ನೇಮಕಾತಿ ಪರೀಕ್ಷೆಗಳಲ್ಲಿ 14 ನೇ ಬಾರಿಗೆ ಪ್ರಶ್ನೆಪತ್ರಿಕೆ ಸೋರಿಕೆಯಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ



Join Whatsapp