IPL-2022: ರಾಹುಲ್ ‘ಗೋಲ್ಡನ್ ಡಕ್’ | ಟೈಟನ್ಸ್’ಗೆ 159 ರನ್ ಗೆಲುವಿನ ಗುರಿ

Prasthutha|

- Advertisement -

ಮುಂಬೈ: ಮುಹಮ್ಮದ್ ಶಮಿ ಬಿಗು ಬೌಲಿಂಗ್ ದಾಳಿಯೆದುರು ಲಕ್ನೋದ ಅಗ್ರ ಕ್ರಮಾಂಕ ವೈಫಲ್ಯ ಕಂಡರೂ, ಬಳಿಕ ಚೇತರಿಕೆಯ ಬ್ಯಾಟಿಂಗ್ ಪ್ರದರ್ಶನ ನೀಡಿದ ಲಖನೌ ಸೂಪರ್ ಜೈಂಟ್ಸ್, ತನ್ನ ಚೊಚ್ಚಲ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಗೆಲುವಿಗೆ 159 ರನ್’ಗಳ ಗುರಿ ನೀಡಿದೆ‌.
29 ರನ್’ಗಳಿಸುವಷ್ಟರಲ್ಲೇ 4 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಲಖನೌ ತಂಡವನ್ನು ಆಕರ್ಷಕ ಅರ್ಧಶತಕಗಳ ಮೂಲಕ ಪಾರು ಮಾಡಿದ ದೀಪಕ್ ಹೂಡ [55] ಹಾಗೂ ಯುವ ಆಟಗಾರ ಅಯೋಷ್ ಬದೋನಿ [54], ತಂಡವು ಸವಾಲಿನ ಮೊತ್ತ ದಾಖಲಿಸುವಲ್ಲಿ ನೆರವಾದರು

ಟಾಸ್ ಗೆದ್ದ ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ, ಲಖನೌ ತಂಡವನ್ನು ಬ್ಯಾಟಿಂಗ್’ಗೆ ಆಹ್ವಾನಿಸಿದರು. ನಾಯಕನ ನಿರ್ಧಾರವನ್ನು ಸಮರ್ಥಿಸುವ ರೀತಿಯಲ್ಲಿ ಬೌಲಿಂಗ್ ಆರಂಭಿಸಿದ ಮುಹಮ್ಮದ್ ಶಮಿ, ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಲಖನೌ ನಾಯಕ ಕೆ.ಎಲ್. ರಾಹುಲ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಫೀಲ್ಡ್ ಅಂಪೈರ್ ಕೀಪರ್ ಕ್ಯಾಚ್‌ ಅನ್ನು ನಿರಾಕರಿಸಿದರೂ, ಟೈಟನ್ಸ್ ನಾಯಕ ಪಾಂಡ್ಯ ಡಿಆರ್’ಎಸ್ ಮೊರೆಹೋದರು. ರೀಪ್ಲೈ’ನಲ್ಲಿ ಚೆಂಡು ಬ್ಯಾಟ್’ಗೆ ತಗುಲಿರುವುದು ಅಲ್ಟ್ರಾ ಎಡ್ಜ್’ನಲ್ಲಿ ಸ್ಪಷ್ಟವಾಗಿತ್ತು. ಹೀಗಾಗಿ ರಾಹುಲ್ ಶೂನ್ಯಕ್ಕೆ ನಿರ್ಗಮಿಸಬೇಕಾಯಿತು. ರಾಹುಲ್ ಜೊತೆ ಇನ್ನಿಂಗ್ಸ್‌ ಆರಂಭಿಸಿದ್ದ ಕ್ಬಿಂಟನ್ ಡಿ ಕಾಕ್ 7 ರನ್ ಗಳಿಸಿದ್ದ ವೇಳೆ ಶಮಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಮೂರನೇ ಕ್ರಮಾಂಕದಲ್ಲಿ ಬಂದ ಎವಿನ್ ಲೂಯಿಸ್ 10 ರನ್ ಗಳಿಸಿದ್ದ ವೇಳೆ ವರುಣ್ ಅರೋನ್ ಬೌಲಿಂಗ್‌ನಲ್ಲಿ ಗಿಲ್’ಗೆ ಕ್ಯಾಚಿತ್ತು ನಿರ್ಗಮಿಸಿದರು. ಮನೀಷ್ ಪಾಂಡೆ 6 ರನ್’ಗಳಿಸುವಷ್ಟರಲ್ಲೇ ಶಮಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.
ಬಳಿಕ ಜೊತೆಗೂಡಿದ ದೀಪಕ್ ಹೂಡ ಹಾಗೂ ಯುವ ಆಟಗಾರ ಅಯೋಷ್ ಬದೋನಿ ತಾಳ್ಮೆಯ ಜೊತೆಯಾಟದ ಮೂಲಕ ಇನ್ನಿಂಗ್ಸ್‌ ಕಟ್ಟಿದರು. ಇಬ್ಬರು ಅರ್ಧಶತಕ ದಾಖಲಿಸಿ ಟೈಟನ್ಸ್ ತಂಡವನ್ನು ದಿಢೀರ್ ಕುಸಿತದಿಂದ ಪಾರು ಮಾಡಿದರು.



Join Whatsapp