ಇನ್ನಿಂಗ್ಸ್ನ ಅಂತಿಮ ಎಸೆತದವರೆಗೂ ಸಾಗಿದ ಮಹಿಳಾ ವಿಶ್ವಕಪ್ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ, ದಕ್ಷಿಣ ಆಫ್ರಿಕಾ ತಂಡ 3 ವಿಕೆಟ್’ಗಳ ಅಂತರದಲ್ಲಿ ಭಾರತವನ್ನು ರೋಚಕವಾಗಿ ಮಣಿಸಿದೆ. ಸೆಮಿಫೈನಲ್ ಪ್ರವೇಶದ ಅಂಚಿನಲ್ಲಿ ಎಡವಿದ ಮಿಥಾಲಿ ಪಡೆ ಟೂರ್ನಿಯಿಂದ ಹೊರಬಿದ್ದಿದೆ.
ಕ್ರೈಸ್ಟ್’ಚರ್ಚ್’ನ ಹಗ್ಲಿ ಓವಲ್ ಮೈದಾನದಲ್ಲಿ ನಡೆದ ‘ಮಾಡು ಇಲ್ಲವೇ ಮಡಿ’ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ, ಆರಂಭಿಕರಾದ ಸ್ಮೃತಿ ಮಂದಣ್ಣ ಹಾಗೂ ಶೆಫಾಲಿ ವರ್ಮಾ ಹಾಗೂ ನಾಯಕಿ ಮಿಥಾಲಿ ರಾಜ್ ಗಳಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ 7 ವಿಕೆಟ್ ನಷ್ಟದಲ್ಲಿ 274 ರನ್’ಗಳಿಸಿತ್ತು.
ಚೇಸಿಂಗ್ ವೇಳೆ ದಿಟ್ಟ ಪ್ರದರ್ಶನ ನೀಡಿದ ಆಫ್ರಿಕಾದ ವನಿತೆಯರು ಇನ್ನಿಂಗ್ಸ್ನ ಅಂತಿಮ ಎಸೆತದವರೆಗೂ ಹೋರಾಡಿ ಗೆಲುವನ್ನು ತಮ್ಮದಾಗಿಸಿಕೊಂಡರು. ಆಫ್ರಿಕಾ ಪರ ಲೌರಾ ವೋಲ್ವಾರ್ಡ್ [80] ಹಾಗೂ ಡು ಪ್ರೀಝ್ [52] ರನ್ ಗಳಿಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.