ಕೋಲ್ಕತ್ತಾ: ಬಿರ್ ಭೂಮ್ ಕೊಲೆ ಪ್ರಕರಣದ ಸಿಬಿಐ ತನಿಖೆಗೆ ಸಹಕರಿಸಲು ಪಶ್ಚಿಮ ಬಂಗಾಳ ಸರಕಾರಕ್ಕೆ
ಹೈಕೋರ್ಟ್ ಸೂಚನೆ ನೀಡಿದ ಮರುದಿನವೇ ತನಿಖೆ ಆರಂಭವಾಗಿದೆ.
ತೃಣಮೂಲ ಕಾಂಗ್ರೆಸ್ ಕಾರ್ಯಕರ್ತನ ಕೊಲೆಯ ಬೆನ್ನಿಗೆ ಮಕ್ಕಳು, ಮಹಿಳೆಯರು ಸೇರಿ ಬೆಂಕಿಯಿಟ್ಟು ಕೊಂದ ಘಟನೆ ನಡೆದಿತ್ತು. ಮುಂದಿನ ವಿಚಾರಣೆಯ ಏಪ್ರಿಲ್ 7ರಂದು ಒಂದು ಆರಂಭಿಕ ವರದಿ ಸಲ್ಲಿಸುವಂತೆ ಕೋರ್ಟ್ ಆದೇಶಿಸಿದೆ.
ಪಶ್ಚಿಮ ಬಂಗಾಳ ಸರಕಾರವು ರಚಿಸಿರುವ ಸಿಟ್- ವಿಶೇಷ ತನಿಖಾ ತಂಡದ ತನಿಖೆಯನ್ನು ಕೂಡಲೆ ನಿಲ್ಲಿಸಿ ಸಿಬಿಐ ತನಿಖೆಗೆ ಸಹಕರಿಸಲು ಕೋರ್ಟ್ ಮಮತಾ ಸರಕಾರಕ್ಕೆ ಹೇಳಿದೆ.
ಕೊಲ್ಕತ್ತಾ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾತ್ಸವ ಮತ್ತು ಜಸ್ಟಿಸ್ ಆರ್. ಭಾರದ್ವಾಜ್ ಅವರಿದ್ದ ಪೀಠವು ಸತ್ಯವನ್ನು ಅಗೆದು ತೆಗೆಯಲು ಕೇಂದ್ರದ ಸಿಬಿಐ ತನಿಖಾ ದಳದ ತನಿಖೆಯೇ ಸೂಕ್ತ ಎಂದು ಹೇಳಿದೆ.
“ನಾವು ಸಿಬಿಐಗೆ ಪೂರ್ಣ ಸಹಕಾರ ನೀಡುತ್ತೇವೆ. ಆದರೆ ಕೇಂದ್ರದ ಬಿಜೆಪಿ ಸರಕಾರದ ಏಜೆನ್ಸಿಯು ಇದನ್ನು ರಾಜ್ಯ ಸರಕಾರದ ಹೆಸರು ಕೆಡಿಸಲು ಉಪಯೋಗಿಸುವ ಸಾಧ್ಯತೆಯಿದೆ” ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ. ರಾಜ್ಯ ಬಿಜೆಪಿಯು ತೃಣಮೂಲ ಕಾಂಗ್ರೆಸ್ ಹಿಂಸೆಗೆ ಕಾರಣ ಎಂದು ಹೇಳಿದ್ದು ಸಿಬಿಐ ತನಿಖೆಯನ್ನು ಸ್ವಾಗತಿಸಿದೆ. ಸಿಪಿಎಂ ಸಹ ಸಿಬಿ ತನಿಖೆಯಾಗಲಿ ಎಂದಿದೆ.
ಬಿರ್ ಭೂಮ್ ರಾಂಪುರ್ ಹತ್ ಬ್ಲಾಕಿನ ಬೋಗ್ತುಯಿ ಗ್ರಾಮದಲ್ಲಿ ಒಂದು ಡಜನ್ ಮನೆಗಳಿಗೆ ಬೆಂಕಿ ಹಚ್ಚಿದ್ದರಿಂದ ಎಂಟು ಜನ ಜೀವಂತ ಸುಟ್ಟು ಹೋಗಿದ್ದರು. ಸಿಟ್ 23 ಜನರನ್ನು ಈ ಸಂಬಂಧ ಬಂಧಿಸಿದೆ. ರಾಂಪುರ್ ಹತ್ ಬ್ಲಾಕಿನ ಟಿಎಂಸಿ ಅಧ್ಯಕ್ ಅನಾರುಲ್ ಹುಸೈನ್ ರೂ ಅದರಲ್ಲಿದ್ದಾರೆ.
ಟಿಎಂಸಿ ನಾಯಕ ಬಾದು ಶೇಖ್ ಕಗ್ಗೊಲೆಯ ಬಳಿಕದ ಹಿಂಸಾಚಾರದಲ್ಲಿ ಮನೆಗೆ ಬೆಂಕಿ ಇಡಲಾಗಿತ್ತು.
ತೃಣಮೂಲ ಕಾಂಗ್ರೆಸ್ಸಿನ ರಾಜ್ಯ ಪ್ರಧಾನ ಕಾರ್ಯದರ್ಶಿ ಕುಣಾಲ್ ಘೋಷ್ “ರಾಜ್ಯ ಸರಕಾರ ಈಗಾಗಲೇ ಈ ಪ್ರಕರಣದ ತನಿಖೆ ಬಹುಪಾಲು ಮುಗಿಸಿದೆ. ಆರೋಪಿಗಳ ಬಂಧನವೂ ಆಗಿದೆ. ಇನ್ನು ನ್ಯಾಯಾಲಯದ ಆದೇಶದಂತೆ ಸಿಬಿಐಗೆ ಸಹಕಾರ ನೀಡುತ್ತೇವೆ” ಎಂದು ಹೇಳಿದರು.
“ಆದರೆ ಬಿಜೆಪಿಯನ್ನು ಪಶ್ಚಿಮ ಬಂಗಾಳದ ಜನರು ತಿರಸ್ಕರಿಸಿದ್ದಾರೆ. ಅಂಥ ಬಿಜೆಪಿ ಸರಕಾರದ ತನಿಖಾ ಏಜೆನ್ಸಿ ಇಲ್ಲಿನ ಪ್ರಕರಣವೊಂದರ ತನಿಖೆ ನಡೆಸುವುದು ಎಷ್ಟು ನ್ಯಾಯಬದ್ಧ?”ಎಂಬ ಪ್ರಶ್ನೆಯನ್ನೂ ಘೋಷ್ ಎಸೆದಿದ್ದಾರೆ. ಬಿಜೆಪಿಯು ಇಡಿ ಮತ್ತು ಸಿಬಿಐಗಳನ್ನು ರಾಜ್ಯ ಸರಕಾರಗಳ ಮೇಲೆ ಛೂ ಬಿಡುತ್ತಿದೆ ಎಂದೂ ಅವರು ಹೇಳಿದರು.