ಬೆಂಗಳೂರು: ಪ್ರಯಾಣಿಕರಿಗೆ ಅನುಕೂಲವಾಗುವಂತೆ ಕರ್ನಾಟಕದಲ್ಲಿ ರೈಲ್ವೇ ಇಲಾಖೆಯು ಹೊಸ ಮಾರ್ಗಗಳನ್ನು ಪ್ರಾರಂಭಿಸಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ರಾಜ್ಯಸಭೆಯಲ್ಲಿ ಒತ್ತಾಯಿಸಿದ್ದಾರೆ.
ಮೈಸೂರಿನಿಂದ ಮಡಿಕೇರಿಗೆ ರೈಲು ಮಾರ್ಗದ ಕುರಿತು ಮಾತನಾಡಿದ ಅವರು, ಹಾಸನದ ಶ್ರವಣಬೆಳಗೊಳವು ಜೈನ ಧರ್ಮದ ಧಾರ್ಮಿಕ ಕೇಂದ್ರವಾಗಿದೆ ಮತ್ತು ಪ್ರಪಂಚದಾದ್ಯಂತದ ಪ್ರವಾಸಿಗರು ಆಗಮಿಸುತ್ತಾರೆ. ಮಡಿಕೇರಿಗೂ ರೈಲಿನ ಮೂಲಕ ಸಂಪರ್ಕ ಕಲ್ಪಿಸಬೇಕಾದ ಅವಶ್ಯಕತೆಯಿದೆ. ಮಡಿಕೇರಿಯಲ್ಲಿ ಗುಡ್ಡಗಾಡು ಭೂಪ್ರದೇಶದ ಕಾರಣದಿಂದ ಯಾವುದೇ ರೈಲು ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ, ರೈಲು ಮಾರ್ಗ ನಿರ್ಮಿಸಲು ಯಾವುದೇ ಪ್ರಯತ್ನ ಕೂಡ ನಡೆದಿಲ್ಲ. ಬೆಂಗಳೂರಿನಿಂದ ಮಂಗಳೂರಿಗೆ ರೈಲು ಓಡಿಸಲು ಇದು ಸಹಾಯವಾಗಲಿದೆ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ರೈಲು ಮೂಲಸೌಕರ್ಯ ಮತ್ತು ಸಂಪರ್ಕ ಕಳಪೆಯಾಗಿದೆ. ದಕ್ಷಿಣ ಭಾರತದಲ್ಲಿ ಅಗ್ರಸ್ಥಾನದಲ್ಲಿರುವ ತಮಿಳುನಾಡಿನಲ್ಲಿ ಮೂರನೇ ಒಂದು ಭಾಗ ಮಾತ್ರ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಮುನಿರಾಬಾದ್ನಿಂದ ಮೆಹಬೂಬ್ನಗರದಂತಹ ಸ್ಥಳಗಳಲ್ಲಿ ಜನರು ಪ್ರಯಾಣಿಸುವಾಗ ರೈಲಿಂಗ್ ಗಳು ಮತ್ತು ಫುಟ್ಬೋರ್ಡ್ಗಳಿಗೆ ನೇತಾಡುತ್ತಾರೆ ಎಂದು ಹೇಳಿ ಸದನದ ಗಮನ ಸೆಳೆದ ದೇವೇಗೌಡರು ತಾವು ಪ್ರಧಾನಿಯಾಗಿದ್ದ ಅವಧಿಯಲ್ಲಿ ಅವಿಭಜಿತ ಆಂಧ್ರಪ್ರದೇಶಕ್ಕೂ ಈ ರೈಲುಗಳನ್ನು ಘೋಷಿಸಲಾಯಿತು ಎಂದು ಹೇಳಿದರು.
ತಾವು ಪ್ರಧಾನಿಯಾಗಿದ್ದಾಗ ಮೈಸೂರು-ಅರಸೀಕೆರೆ ಮಾರ್ಗ ರದ್ದು ಮಾಡಲು ರೈಲ್ವೆ ಅಧಿಕಾರಿಗಳು ಚಿಂತನೆ ನಡೆಸಿದ್ದರು. ಆದರೆ ತಾನು ಮಧ್ಯ ಪ್ರವೇಶಿಸುವ ಮೂಲಕ ಆ ಪ್ರಸ್ತಾಪ ಕೈ ಬಿಡಲಾಯಿತು, ಹೀಗಾಗಿ, ಈಗ ಆ ಮಾರ್ಗದಲ್ಲಿ 28 ರೈಲುಗಳು ಸಂಚರಿಸುತ್ತಿವೆ ಎಂದು ಅವರು ರಾಜ್ಯಸಭೆಯಲ್ಲಿ ಮಾಹಿತಿ ನೀಡಿದರು.
ಕರ್ನಾಟಕಕ್ಕೆ ಅನುಕೂಲವಾಗುವಂತೆ ದಕ್ಷಿಣ ರೈಲ್ವೆಯಿಂದ ನೈಋತ್ಯ ರೈಲ್ವೇ ಯನ್ನು ಸ್ಥಾಪಿಸಿದ ಕೀರ್ತಿಗೆ ದೇವೇಗೌಡರು ಪಾತ್ರರಾಗಿದ್ದಾರೆ.