ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯು ಮಲಪ್ಪುರಂನಲ್ಲಿ ನಡೆಯಿತು. ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿರ್ಬಂಧದ ವಿರುದ್ಧ ಕರ್ನಾಟಕದ ಮುಸ್ಲಿಮ್ ವಿದ್ಯಾರ್ಥಿನಿಯರು ನಡೆಸುತ್ತಿರುವ ಹೋರಾಟದ ಜೊತೆಗೆ ಸಂಘಟನೆ ನಿಲ್ಲುತ್ತದೆ ಎಂದು ಸಭೆ ತನ್ನ ನಿರ್ಣಯವೊಂದರಲ್ಲಿ ಹೇಳಿದೆ.
ವಿಶೇಷವಾಗಿ ಮುಸ್ಲಿಮ್ ಧಾರ್ಮಿಕ ಗುರುತುಗಳ ಮೇಲೆ ನಿರ್ಬಂಧ ಹೇರುವ ಕರ್ನಾಟಕ ಬಿಜೆಪಿ ಸರಕಾರದ ತೀರ್ಮಾನದ ಹಿಂದೆ ಸ್ಪಷ್ಟವಾಗಿ ವಿಭಜನಕಾರಿ ರಾಜಕೀಯದ ಉದ್ದೇಶವಿತ್ತು. ದುರದೃಷ್ಟವಶಾತ್, ಅದನ್ನು ಗಮನಿಸಲು ಹೈಕೋರ್ಟ್ ವಿಫಲವಾಯಿತು ಮತ್ತು ದೇಶದಲ್ಲಿ ಮುಸ್ಲಿಮ್ ಮಹಿಳೆಯರು ಶತಮಾನಗಳಿಂದ ತಮ್ಮ ಅಸ್ಮಿತೆಯ ಭಾಗವಾಗಿ ಪಾಲಿಸುತ್ತಾ ಬಂದ ಆಚರಣೆಯ ವಿರುದ್ಧ ನಿಲುವು ತಾಳಿತು. ಹಿಜಾಬ್ ನಿಷೇಧವನ್ನು ಮಾನ್ಯಗೊಳಿಸುವ ಕೋರ್ಟ್ ಆದೇಶವು ಸಾಂವಿಧಾನಿಕ ಮೌಲ್ಯಗಳು ಮತ್ತು ಧಾರ್ಮಿಕ ಸ್ವಾತಂತ್ರ್ಯದ ಸಾರ್ವತ್ರಿಕ ತತ್ವಗಳಿಗೆ ವಿರುದ್ಧವಾಗಿದೆ. ಹೈಕೋರ್ಟ್ ನ ನಿರ್ಧಾರವು ಸಾಮಾಜಿಕ ಬಹಿಷ್ಕಾರವನ್ನು ಮತ್ತಷ್ಟು ಉತ್ತೇಜಿಸಲಿದೆ ಮತ್ತು ಧಾರ್ಮಿಕ ಶೋಷಣೆಗೆ ಮತ್ತೊಂದು ಸಬೂಬು ಆಗಲಿದೆ. ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲು ಮತ್ತು ನ್ಯಾಯ ಪಡೆಯುವ ವರೆಗೂ ಹೋರಾಟ ಮುಂದುವರಿಸುವ ನಿರ್ಧಾರ ಕೈಗೊಂಡಿರುವ ವಿದ್ಯಾರ್ಥಿನಿಯರ ಹೋರಾಟದೊಂದಿಗೆ ಪಾಪ್ಯುಲರ್ ಫ್ರಂಟ್ ನಿಲ್ಲಲಿದೆ.
ಮೊತ್ತೊಂದು ನಿರ್ಣಯದಲ್ಲಿ, ‘ಕಾಶ್ಮೀರ ಫೈಲ್ಸ್’ ಸಿನಿಮಾದ ಹೆಸರಿನಲ್ಲಿ ಹರಡುತ್ತಿರುವ ಸರಕಾರಿ ಪ್ರಾಯೋಜಿತ ಇಸ್ಲಾಮೋಫೋಬಿಯಾವನ್ನು ಕೊನೆಗೊಳಿಸುವಂತೆ ಪಾಪ್ಯುಲರ್ ಫ್ರಂಟ್ ಆಗ್ರಹಿಸಿದೆ. ವಿವೇಕ್ ಅಗ್ನಿಹೋತ್ರಿಯಿಂದ ರಚಿಸಲಾದ ಈ ಸಿನಿಮಾ ಸ್ವತಃ ಪ್ರಧಾನಿಯವರಿಂದ ಶಿಫಾರಸು ಮಾಡಲ್ಪಟ್ಟಿದೆ ಮತ್ತು ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಇದನ್ನು ಒಂದು ಸಿನಿಮಾಗಿಂತಲೂ ಹೆಚ್ಚಾಗಿ ತೆರಿಗೆ ವಿನಾಯಿತಿಯೊಂದಿಗೆ ಪ್ರಚಾರ ಮಾಡಲಾಗುತ್ತಿದೆ. ಸಿನಿಮಾದ ಬಿಡುಗಡೆಯ ಬಳಿಕ ನಡೆದ ನಾಟಕೀಯ ಘಟನೆಗಳು, ಇದು ಮತ್ತೊಂದು ಸಂಘಟಿತ ಮುಸ್ಲಿಮ್ ವಿರೋಧಿ ಪ್ರೊಪಗಾಂಡಾದ ಭಾಗವಾಗಿದೆ ಎಂಬುದನ್ನು ಸೂಚಿಸುತ್ತದೆ. ಹಿಂದುತ್ವ ನಿರೂಪಣೆಯ ಪರವಾಗಿ ಕಾಶ್ಮೀರ ಘಟನೆಯ ವಾಸ್ತವಗಳನ್ನು ತಿರುಚಿ ಪ್ರಸ್ತುತಪಡಿಸುವ ಮೂಲಕ ಈ ಸಿನಿಮಾವು ಮುಸ್ಲಿಮ್ ಸಮುದಾಯ ಮತ್ತು ಬಿಜೆಪಿ ರಾಜಕೀಯ ವಿರೋಧಿಗಳ ವಿರುದ್ಧ ದ್ವೇಷದ ಜ್ವಾಲೆಯನ್ನು ಹಚ್ಚುತ್ತಿದೆ. ಸರಕಾರವೇ ಸ್ವತಃ ಸಿನಿಮಾ ಪ್ರಚಾರಕ್ಕಿಳಿದ ಸನ್ನಿವೇಶವನ್ನು ದೇಶವು ಹಿಂದೆಂದೂ ಕಂಡಿರಲಿಲ್ಲ. ಸಿನಿಮಾ ವೀಕ್ಷಿಸಿ ಬಳಿಕ ಸಿನಿಮಾ ಗೃಹಗಳಲ್ಲಿ ಮುಸ್ಲಿಮರನ್ನು ನಿಂದಿಸಿದ ಮತ್ತು ಅವರ ನರಮೇಧಕ್ಕೂ ಕರೆ ನೀಡಿದಂತಹ ಹಲವಾರು ಘಟನೆಗಳು ನಡೆದವು. ಪ್ರಮುಖ ರಾಜಕೀಯ ಪ್ರಶ್ನೆಗಳನ್ನು ನಿಗ್ರಹಿಸಲು ಬಿಜೆಪಿಯು ಉಗ್ರ ದ್ವೇಷದ ಪ್ರೊಪಗಾಂಡದ ಮರೆಯಲ್ಲಿ ಆಶ್ರಯ ಪಡೆಯುತ್ತಿದೆ. ದೇಶದ ನ್ಯಾಯಾಲಯವು ಸನ್ನಿವೇಶದತ್ತ ಗಮನ ಹರಿಸಬೇಕು ಮತ್ತು ಮುಸ್ಲಿಮರ ವಿರುದ್ಧದ ಸರಕಾರಿ ಪ್ರಾಯೋಜಿತ ದ್ವೇಷ ಹರಡುವಿಕೆಯನ್ನು ತಡೆಯಬೇಕೆಂದು ಪಾಪ್ಯುಲರ್ ಫ್ರಂಟ್ ಮನವಿ ಮಾಡಿದೆ.
ಯುಪಿಯಲ್ಲಿ ನಡೆಯುತ್ತಿರುವ ಗುಂಪು ಹತ್ಯೆಯ ಘಟನೆಗಳನ್ನು ಪಾಪ್ಯುಲರ್ ಫ್ರಂಟ್ ಎನ್.ಇ.ಸಿ. ತನ್ನ ಮತ್ತೊಂದು ನಿರ್ಣಯದಲ್ಲಿ ಖಂಡಿಸಿದೆ. ಕೇವಲ ವಾರವೊಂದರಲ್ಲೇ ಉತ್ತರ ಪ್ರದೇಶದಲ್ಲಿ ಎರಡು ಗುಂಪು ಥಳಿತದ ಘಟನೆಗಳು ನಡೆದಿದ್ದು, ಇದರಲ್ಲಿ ಓರ್ವ ಮುಸ್ಲಿಮ್ ವ್ಯಕ್ತಿ ಹತ್ಯೆಯಾಗಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ. ರಾಜ್ಯದಲ್ಲಿ ಈ ಮುಸ್ಲಿಮ್ ವಿರೋಧಿ ಭಾವನೆಗಳನ್ನು ದ್ವೇಷಪೂರಿತ ಅಭಿಯಾನಗಳ ಮೂಲಕ ಚುನಾವಣೆಗೂ ಮುನ್ನ ಉದ್ದೇಶಪೂರ್ವಕವಾಗಿ ಸೃಷ್ಟಿಸಲಾಗಿದೆ. ಇದೀಗ ಅಮಾಯಕರು ಇದಕ್ಕೆ ಬೆಲೆ ತೆರುತ್ತಿದ್ದಾರೆ. ದೇಶದ ಜನರ ಅಂತಃಸಾಕ್ಷಿಯು ಸಾಮಾಜಿಕ ಪಿಡುಗಿನ ರೂಪದಲ್ಲಿರುವ ಗುಂಪು ಥಳಿತದ ವಾಸ್ತವಿಕತೆಯನ್ನು ಅರಿತುಕೊಂಡು ಅದನ್ನು ಎದುರಿಸಬೇಕಾಗಿದೆ ಮತ್ತು ಅದರ ವಿರುದ್ಧ ಹೋರಾಡಲು ಒಂದು ಕಾನೂನು ರಚನೆಗೆ ಒತ್ತಡ ಹೇರಲು ಇದು ಸಕಾಲವಾಗಿದೆ.
ಪಶ್ಚಿಮ ಬಂಗಾಳದ ಬಿರ್ ಭೂಮ್ ನಲ್ಲಿ ಸಂಭವಿಸಿದ ಭಯಾನಕ ಹಿಂಸಾಚಾರ ಮತ್ತು ಹಲವಾರು ಮಂದಿಯ ಸಾವಿಗೆ ಕಾರಣವಾದ ಘಟನೆಗೆ ಸಂಬಂಧಿಸಿದಂತೆ ಎನ್.ಇ.ಸಿ ತನ್ನ ಮತ್ತೊಂದು ನಿರ್ಣಯದಲ್ಲಿ ಆಘಾತ ವ್ಯಕ್ತಪಡಿಸಿದೆ. ವರದಿಗಳನ್ನು ಗಮನಿಸುವುದಾರೆ, ಸೋಮವಾರ ನಡೆದ ಮೊದಲ ಹತ್ಯೆಯ ಬಳಿಕ ಪೊಲೀಸರು ಸಕಾಲದಲ್ಲಿ ಕಾರ್ಯಾಚರಣೆ ನಡೆಸಲು ಮತ್ತು ಮಹಿಳೆಯರು ಹಾಗೂ ಮಕ್ಕಳ ಸಹಿತ ಎಂಟು ಮಂದಿ ಅಮಾಯಕರನ್ನು ಹತ್ಯೆ ನಡೆಸಿದ ಗುಂಪನ್ನು ತಡೆಯಲು ವಿಫಲರಾಗಿರುವುದು ಕಂಡು ಬರುತ್ತದೆ. ಘಟನೆಗೆ ಸಂಬಂಧಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಮತ್ತು ಎಲ್ಲಾ ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಪಾಪ್ಯುಲರ್ ಫ್ರಂಟ್ ಆಗ್ರಹಿಸುತ್ತದೆ.