‘ದಾರಿ ತಪ್ಪಿದ ಮಗ’ನನ್ನು ನೋಡಿ ದಿವಂಗತ ಎಸ್.ಆರ್. ಬೊಮ್ಮಾಯಿಯವರ ಆತ್ಮ ಅದೆಷ್ಟು ಕೊರಗುತ್ತಿದೆಯೋ: ಸಿಎಂ ಕಾಲೆಳೆದ ಕಾಂಗ್ರೆಸ್

Prasthutha|

ಬೆಂಗಳೂರು: ಧರ್ಮದ ಆದಾರದಲ್ಲಿ ರಾಜ್ಯವನ್ನು ವಿಂಗಡಿಸುತ್ತಿರುವ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಗರಂ ಆಗಿರುವ ಕಾಂಗ್ರೆಸ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರನ್ನು ಹಿಗ್ಗಾಮುಗ್ಗಾ ಜಾಡಿಸಿದೆ. ‘ದಾರಿ ತಪ್ಪಿದ ಮಗ’ನನ್ನು ನೋಡಿ ದಿವಂಗತ ಎಸ್.ಆರ್. ಬೊಮ್ಮಾಯಿಯವರ ಆತ್ಮ ಅದೆಷ್ಟು ಕೊರಗುತ್ತಿದೆಯೋ’ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಸಿಎಂ ಕಾಲೆಳೆದಿದೆ.

- Advertisement -

ಸರಣಿ ಟ್ವೀಟ್ ಮೂಲಕ ವ್ಯಂಗ್ಯವಾಡಿರುವ ಕಾಂಗ್ರೆಸ್, ಬೊಮ್ಮಾಯಿ ಅವರು ಉತ್ತರ ಪ್ರದೇಶ ಮಾದರಿ ಅನುಸರಿಸಿ ರಾಜ್ಯದಲ್ಲಿ ಬೆಂಕಿ ಹಚ್ಚಲು ಮುಂದಾಗಿದ್ದಾರೆ. ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಪರ ಚರ್ಚೆಯ ಬದಲು ಧರ್ಮದ ಆಧಾರದ ಅನಗತ್ಯ ಕಲಹಗಳನ್ನು ಸೃಷ್ಟಿಸುತ್ತಿದ್ದಾರೆ. ‘ದಾರಿ ತಪ್ಪಿದ ಮಗ’ನನ್ನು ನೋಡಿ ದಿವಂಗತ ಎಸ್.ಆರ್. ಬೊಮ್ಮಾಯಿಯವರ ಆತ್ಮ ಅದೆಷ್ಟು ಕೊರಗುತ್ತಿದೆಯೋ’ ಎಂದು #ಬಿಲ್ಡಪ್‌ಬೊಮ್ಮಾಯಿ ಹ್ಯಾಷ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿದೆ.

‘ಬೊಮ್ಮಾಯಿಯವರು ತಮ್ಮ ಅಭಿವೃದ್ಧಿ ಕೆಲಸಗಳನ್ನು ತೋರಿಸಿ ಮತ ಕೇಳಲು ಮುಖವಿಲ್ಲದೆ ಚುನಾವಣೆಗೆ ಮತೀಯ ವಿಷಯಗಳನ್ನು ಮುಂದಿಡಲು ನೆಲ ಹದಗೊಳಿಸುತ್ತಿದ್ದಾರೆ. ಆಕ್ಷನ್‌ಗೆ ರಿಯಾಕ್ಷನ್ ಎಂದಾಗಲೇ ಅವರೊಳಗಿನ ಕ್ರೌರ್ಯದ ಮುಖ ಅನಾವರಣವಾಯ್ತು. ಅಲ್ಲಿಂದ ಇಲ್ಲಿಯವರೆಗೂ ರಾಜ್ಯದಲ್ಲಿ ಅಭಿವೃದ್ಧಿ ಆಧಾರಿತ ಚರ್ಚೆಯೇ ನಡೆದಿಲ್ಲ’ ಎಂದು ಟ್ವೀಟ್‌ನಲ್ಲಿ ಕಾಂಗ್ರೆಸ್ ಆರೋಪಿಸಿದೆ.

- Advertisement -

‘ಕ್ರಿಯೆಗೆ ಪ್ರತಿಕ್ರಿಯೆ ಎಂದು ಗೂಂಡಾಗಿರಿಗೆ ಒಪ್ಪಿಗೆ, ಮತಾಂತರ ನಿಷೇಧ ಮಸೂದೆ, ತ್ರಿವರ್ಣಧ್ವಜಕ್ಕೆ ಅವಮಾನ, ಹಿಜಾಬ್ – ಕೇಸರಿ ಶಾಲು, ಹರ್ಷ ಕೊಲೆ ಪ್ರಕರಣದ ವೈಭವೀಕರಣ, ಕಾಶ್ಮೀರ್ ಫೈಲ್ಸ್ ಪ್ರಚಾರ, ವ್ಯಾಪಾರಕ್ಕೂ ಕೋಮುದ್ವೇಷದ ಲೇಪ, ಬೊಮ್ಮಾಯಿ ಅವರೇ, ಇದೇ ಅಲ್ಲವೇ ನಿಮ್ಮ ಸಾಧನೆಯ ಪಟ್ಟಿ, ಇದಲ್ಲದೆ ಬೇರೆನಿದೆ’ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.




Join Whatsapp